ಶ್ರೀಗುರುಭ್ಯೋ ನಮಃ
ಲೇಖನದ ವಿಷಯಾನುಕ್ರಮಣಿಕೆ
ನರಸಿಂಹನಖಸ್ತುತಿ
ನಖಸ್ತುತಿರಚನೆಯ ಹಿನ್ನೆಲೆ
ನಖಸ್ತುತಿಯ ವ್ಯಾಖ್ಯಾನಗಳು
ನರಹಿಂಹನಖಸ್ತುತಿ
ಶ್ರೀಮದಾಚಾರ್ಯರು ಸರ್ವಮೂಲಗ್ರಂಥಗಳಲ್ಲಿ ನರಸಿಂಹದೇವರ ನಖ(ಉಗುರು)ಗಳನ್ನು
ಸ್ತುತಿಸುವ ಮೂಲಕ ನರಸಿಂಹದೇವರ ಅನುಗ್ರಹವನ್ನು ಪ್ರಾರ್ಥಿಸುವ ‘ನರಸಿಂಹನಖಸ್ತುತಿಯೂ’ ಒಂದು.
ಈ ಗ್ರಂಥದಲ್ಲಿ ಎರಡು ಶ್ಲೋಕಗಳಿವೆ, ‘ಪಾಂತ್ವ-ಸ್ಮಾನ್’ ಎಂದು ಆರಂಭವಾಗುವ ಶ್ಲೋಕವು
ಮೊದಲನೆಯದ್ದು. ‘ಲಕ್ಷ್ಮಿಕಾಂತ..’ ಎಂದು ಆರಂಭ-ವಾಗುವ ಶ್ಲೋಕವು ಎರಡನೆಯದ್ದು.
ಶ್ಲೋಕದ್ವಯಾತ್ಮಕವಾದ ಈ ಗ್ರಂಥವನ್ನು, ತ್ರಿವಿಕ್ರಮಪಂಡಿತಾಚಾರ್ಯರು ರಚಿಸಿರುವ ವಾಯು-
ಸ್ತುತಿಯ ಆರಂಭದಲ್ಲಿ ಮತ್ತು ಕೊನೆಯಲ್ಲಿ,
ವಾಯುಸ್ತುತಿಯ ಉನ್ನತಸಿದ್ಧಿಗಾಗಿ, ಆಚಾರ್ಯರ ಆದೇಶದಂತೆ ಹೇಳುವುದು ಅತ್ಯಂತ ದೃಢವಾದ,
ಸಾರ್ವತ್ರಿಕವಾದ, ನಿರ್ವಿವಾದವಾದ, ಶುದ್ಧಪದ್ಧತಿ.
ನರಸಿಂಹನಖಸ್ತುತಿರಚನೆಯ ಹಿನ್ನೆಲೆ
ನಖಸ್ತುತಿ-ವಾಯುಸ್ತುತಿಗಳ ರಚನೆ ಒಂದೇ ಸಂದರ್ಭದಲ್ಲಿ ಆಗಿದ್ದರಿಂದ, ಅವುಗಳ ಹಿನ್ನೆಲೆಯು ಒಂದೇ ಆಗಿದೆ.
ಹಾಗಾಗಿ ವಾಯುಸ್ತುತಿರಚನೆಯ ಹಿನ್ನೆಲೆಯನ್ನು ಅರ್ಥಮಾಡಿಕೊಂಡರೆ ನಖಸ್ತುತಿಯ
ಹಿನ್ನೆಲೆಯೂ ಸ್ಪಷ್ಟವಾಗುತ್ತದೆ. ಹಾಗಾಗಿ ವಾಯು-ಸ್ತುತಿಯ ಹಿನ್ನೆಲೆಯನ್ನು ನಾವು ನೋಡೋಣ.
ಒಮ್ಮೆ ತ್ರಿವಿಕ್ರಮಪಂಡಿತಾಚಾರ್ಯರು ಆಚಾರ್ಯರ ಜೊತೆಯಲ್ಲಿ ಬದರಿಗೆ ಹೋಗಿರುತ್ತಾರೆ.
ಬದರಿಯಲ್ಲಿ ನಾರಾಯಣದೇವಸ್ಥಾನದಲ್ಲಿ ಬಾಗಿಲನ್ನು ಮುಚ್ಚಿ, ನಾರಾಯಣನನ್ನು ಆಚಾರ್ಯರು
ಪೂಜಿಸುತ್ತಿದ್ದರು.
‘ಈಗ ಆಚಾರ್ಯರು ಏನು ಮಾಡುತ್ತಿರುವವರು?’
ಎಂಬ ಜಿಜ್ಞಾಸೆಯಿಂದ ಬಾಗಿಲಿನ ಕಿಂಡಿಯಿಂದ ನೋಡಿದ ತ್ರಿವಿಕ್ರಮಪಂಡಿತಾಚಾರ್ಯರು, ಜಾಂಬ-
ವಂತನು ಕೃಷ್ಣರೂಪಲ್ಲಿ ಶ್ರೀರಾಮರೂಪವನ್ನು ಕಂಡಂತೆ, ಮಧ್ವರೂಪದಲ್ಲಿ ಹನುಮದ್ರೂಪವನ್ನು ನೋಡಿದರು.
ಆಗ ‘ಆಚಾರ್ಯರು ಸಾಕ್ಷಾದ್ವಾಯುದೇವರೇ’ಎನ್ನುವುದು ಮತ್ತಷ್ಟು ಪರಿಪಕ್ವ ವಾಯಿತು.
ಆಗ ಮೂಲರೂಪೀವಾಯುದೇವರ, ಅವರ ಅವತಾರಗಳ ಸ್ತೋತ್ರವನ್ನು ರಚಿಸದರು.
ಆ ಸ್ತುತಿಯನ್ನು ಆಚಾರ್ಯರಿಗೆ ತೋರಿಸಿದಾಗ “ಈ ಸ್ತುತಿಯು ಲೋಕಪ್ರಸಿದ್ಧವಾಗಲಿ. ಈ
ವಾಯುಸ್ತುತಿಯ ಪುನಶ್ಚರಣವನ್ನು ಮಾಡುವವರಿಗೆ ‘ತತ್ತದಪೇಕ್ಷಿ-ತಫಲವು ಸಿಗಲಿ’ ಎಂಬ ವರವನ್ನು ನೀಡಿದರು.
ಈ ಗ್ರಂಥಕ್ಕೆ ಕಳಸಪ್ರಾಯವಾಗಿ ಆಚಾರ್ಯರು, ಸರ್ವಾನಿಷ್ಟನಿವರ್ತಕನೃಸಿಂಹನಖಸ್ತುತಿಪ್ರತಿಪಾದಕ
ಶ್ಲೋಕದ್ವಯಗಳನ್ನು ರಚಿಸಿ, ಮಂಗಳರೂಪದಲ್ಲಿ ನೀಡುತ್ತಾರೆ. ಜೊತೆಗೆ ‘ಈ ಗ್ರಂಥದ ಆರಂಭದಲ್ಲಿ,
ಹಾಗೂ ಕೊನೆಯಲ್ಲಿ ಶ್ಲೋಕವನ್ನು ಕರಸಂಪುಟಾ-ಕಾರದಿಂದ ಪಠಿಸುವವರಿಗೆ ಫಲವು ಲಭಿಸುತ್ತದೆ’
ಎಂದು ಹೇಳಿ, ಈ ಎರಡು ಶ್ಲೋಕಗಳನ್ನು ಕೊಟ್ಟರು. ಎಂದು ಐತಿಹ್ಯ. (ಇದು ಛಲಾರಿ-ಶೇಷಾಚಾರ್ಯರ, ಹಾಗೂ ಭಗವಂತರಾಯರ ವ್ಯಾಖ್ಯಾನಗಳಲ್ಲಿ ಇರುವ
ಕಥೆ.)
ನಖಸ್ತುತಿಯ ವ್ಯಾಖ್ಯಾನಗಳು
ನಖಸ್ತುತಿಗೆ ಅನೇಕ ವ್ಯಾಖ್ಯಾನಗಳಿವೆ. ಅದರಲ್ಲಿ ಈಗ ಮೂರು ಉಪಲಬ್ಧವಾಗಿವೆ, ಮುದ್ರಿತವೂ ಆಗಿದೆ.
೧) ಛಲಾರಿ ಶೇಷಾಚಾರ್ಯರ ವ್ಯಾಖ್ಯಾನ
೨) ವಿಶ್ವಪತಿತೀರ್ಥರ ವ್ಯಾಖ್ಯಾನ
೩) ಭಗವಂತರಾಯರ ವ್ಯಾಖ್ಯಾನ
ಇಂತಹ ನಖಸ್ತುತಿಸಹಿತವಾದ ವಾಯುಸ್ತುತಿಯ ನಿತ್ಯ ಪಠನದಿಂದ ಶ್ರೀಮದಾಚಾರ್ಯರ
ನರಸಿಂಹದೇವರ ಅನುಗ್ರಹವು ಎಲ್ಲ ಸಜ್ಜನರ ಮೇಲೆ ನಿರಂತರವಾಗಿ ಇರಲಿ.
ಶ್ರೀಕೃಷ್ಣಾರ್ಪಣಮಸ್ತು