ಶ್ರೀಗುರುಭ್ಯೋ ನಮಃ:
ಕಂದುಕಸ್ತುತಿಯ ಹಿನ್ನೆಲೆ
ಶ್ರೀಮದಾಚಾರ್ಯರು ತಮ್ಮ ಬಾಲ್ಯದಲ್ಲಿ ಉಪನಯನ- ಕ್ಕಿಂತಲೂ ಮೊದಲು ಚೆಂಡಿನಿಂದ
ಆಟವಾಡುವ ಸಂದರ್ಭದಲ್ಲಿ ಈ ಸ್ತೋತ್ರವನ್ನು ರಚಿಸಿದ್ದಾರೆ ಎನ್ನುವುದು ಐತಿಹ್ಯ.
ಇದರಲ್ಲಿ ಎರಡು ಪದ್ಯಗಳಿವೆ. ವಿಶಿಷ್ಟವಾದ ಅಪರೂಪದ ನಡೆಯಿಂದ ಕೂಡಿದ ಶ್ಲೋಕಗಳಿವು.
ಪರಮಾತ್ಮನ ಅನೇಕರೂಪಗಳನ್ನು, ವಿಶೇಷವಾಗಿ ಪರಮಾತ್ಮನ ಬಾಲಲೀಲೆಗಳನ್ನು ಇಲ್ಲಿ ವರ್ಣಿಸಲಾಗಿದೆ.
“ಈ ಸ್ತೋತ್ರದ ಪಠಣದಿಂದ ಸಾಧಕರಿಗೆ ವಿಶೇಷ-ವಾಗಿ ಬಾಲಕರಿಗೆ ಉತ್ತಮಯಶಸ್ಸು ದೊರೆಯುತ್ತದೆ”
ಎನ್ನುವುದು ಪ್ರಾಜ್ಞರ ವಚನ.
ಹೆಸರಿನ ಔಚಿತ್ಯ
೧) ಸಂಸ್ಕೃತದಲ್ಲಿ ಚೆಂಡಿಗೆ ಕಂದುಕ ಎನ್ನುತ್ತಾರೆ. ಆದ್ದರಿಂದ ಕಂದುಕ(ಚೆಂಡಿನ)ಕ್ರೀಡೆಯ ಸಮಯದಲ್ಲಿ
ರಚಿತವಾದ ಸ್ತುತಿ ಕಂದುಕಸ್ತುತಿ.
೨) ಕಂದುಕ ಎಂದರೆ ಸುಖವನ್ನು ಕೊಡುವವನು ಎಂಬ ಅರ್ಥವೂ ಇದೆ. ನಿಜವಾಗಿ ಪೂರ್ಣಸುಖವನ್ನು
ಕೊಡುವವನು ಪರಮಾತ್ಮನೆ. ಹೀಗೆ ಕಂದುಕ ಎಂಬ ಶಬ್ದದಿಂದ ವಾಚ್ಯನಾದ ಪರಮಾತ್ಮನ ಸ್ತುತಿಯೇ ಕಂದುಕಸ್ತುತಿ.
ಹೀಗೆ ಎರಡು ಕಾರಣಗಳಿಂದ ಈ ಗ್ರಂಥಕ್ಕೆ ಈ ಹೆಸರು ಯೋಗ್ಯವಾಗಿದೆ.
ಈ ಗ್ರಂಥವನ್ನು ಕೃಷ್ಣಸ್ತುತಿ, ಕೃಷ್ಣಪದ್ಯ ಎಂದೂ ಕರೆಯಲಾಗುತ್ತದೆ.
ಈ ಗ್ರಂಥವನ್ನು “ಅಂಬರಗಂಗಾಖ್ಯಪದ್ಯರೂಪ.... ಗ್ರಂಥಕರ್ತ್ರೇ” ಎಂದು ಹೇಳುವುದರ ಮೂಲಕ
ಬಿದಿರಹಳ್ಳಿ ಶ್ರೀನಿವಾಸತೀರ್ಥರು ತಮ್ಮ ಮುಖ್ಯಪ್ರಾಣಗದ್ಯದಲ್ಲಿ ಉಲ್ಲೇಖಿಸಿದ್ದಾರೆ.
ಈ ಗ್ರಂಥದ ಪಠನೆಯಿಂದ ಎಲ್ಲ ಸಜ್ಜನರಿಗೂ ವಾಸುದೇವನು ಅನುಗ್ರಹಿಸಲಿ.
ಶ್ರೀಕೃಷ್ಣಾರ್ಪಣಮಸ್ತು