2025 Chaturmasya at Bhagyanagara, more details here.
ಶ್ರೀಗುರುಭ್ಯೋ ನಮಃ
ಸದಾಚಾರಸ್ಮೃತಿ
ಶ್ರೀಮದಾಚಾರ್ಯರ ಸರ್ವಮೂಲಗ್ರಂಥಗಳಲ್ಲಿ ಸದಾಚಾರಸ್ಮೃತಿಯೂ ಒಂದು.
ದೈನಂದಿನ ಆಚರಣೆಗಳನ್ನು ತಿಳಿಸುವ ಈ ಗ್ರಂಥವು ಆಕೃತಿಯಲ್ಲಿ ವಾಮನನಂತಿದ್ದರು, ಅರ್ಥವಿವರಣೆಯಲ್ಲಿ
ತ್ರಿವಿಕ್ರಮನಂತಾಗುತ್ತದೆ.
ಪ್ರತಿನಿತ್ಯ ಪ್ರಾತ: ಕಾಲದಲ್ಲಿ ಈ ಗ್ರಂಥದ ಪಠಣ ಮಾಡುವುದರಿಂದ ದೈನಂದಿನ ಆಚರಣೆಯೂ
ತಿಳಿಯುತ್ತದೆ ಮಹಾಪುಣ್ಯವೂ ಪ್ರಾಪ್ತವಾಗುತ್ತದೆ.
ಸಾಮಾನ್ಯರಿಗೆ ಸಾಮಾನ್ಯವಾಗಿ ಅರ್ಥವಾಗುವ ಈ ಗ್ರಂಥವು ವಿದ್ವಜ್ಜನರ ಮಾತುಗಳಲ್ಲಿ ವಿಶೇಷವಾಗಿ ಗೋಚರಿಸುತ್ತದೆ.
ಸದಾಚಾರಸ್ಮೃತಿಯ ವ್ಯಾಖ್ಯಾನಗಳು
ಸದಾಚಾರಸ್ಮೃತಿಯ ಆಧಾರದಲ್ಲಿಯೇ ಎಲ್ಲಾ ಮಾಧ್ವಧರ್ಮಗ್ರಂಥಗಳು ರಚಿತವಾಗಿವೆ. ಇದರ ಛಾಯಾವ್ಯಾಖ್ಯಾನಗಳು ಅನೇಕ.
ಪ್ರತಿಪದವ್ಯಾಖ್ಯಾನಗಳೂ ಅನೇಕ. ಆದರೂ ಅವುಗಳಲ್ಲಿ ಈಗ ಉಪಲಬ್ಧವಾಗಿ ಮುದ್ರಿತವಾಗಿರುವ
ವ್ಯಾಖ್ಯಾನಗಳನ್ನು ಇಲ್ಲಿ ತಿಳಿಯೋಣ.
೧) ಶ್ರೀರಘೂತ್ತಮಸ್ವಾಮಿಗಳ ಶಿಷ್ಯರಾದ ತರಂಗಣೀ ವ್ಯಾಸರಮಾಚಾರ್ಯರ ತಂದೆಯಾದ
ವಿಶ್ವನಾಥಸೂರಿಗಳು ಬರೆದ ಸದಾಚಾರಸ್ಮೃತಿದೀಪಿಕಾ. ಪ್ರಾಯ: ಉಪಲಬ್ಧವ್ಯಾಖ್ಯಾನಗಳಲ್ಲಿ ಇದು ಪ್ರಾಚೀನ.
೨) ಬಿದರಹಳ್ಳಿ ಶ್ರೀನಿವಾಸತೀರ್ಥರು ರಚಿಸಿದ ಆಹ್ನೀಕಕೌಸ್ತುಭ
೩) ಶ್ರೀರಾಘವೇಂದ್ರಸ್ವಾಮಿಗಳ ಶಿಷ್ಯರಾದ ಸ್ಮೃತಿಮುಕ್ತಾವಲೀಕರ್ತೃಗಳು ಎಂದೇ ಪ್ರಸಿದ್ಧರಾದ
ಕೃಷ್ಣಾಚಾರ್ಯರ ವ್ಯಾಖ್ಯಾನ.
೪) ಆಯಿ ನರಸಿಂಹಾಚಾರ್ಯರು ರಚಿಸಿದ ವ್ಯಾಖ್ಯಾನ.
೫) ಶ್ರೀಸತ್ಯಾಭಿನವತೀರ್ಥರ ಶಿಷ್ಯರಾದ ನರಸಿಂಹಾಚಾರ್ಯರು ರಚಿಸಿದ ಭಾವಪ್ರಕಾಶಿಕಾ ಎಂಬ ವ್ಯಾಖ್ಯಾನ.
೬) ಶ್ರೀಸತ್ಯಪೂರ್ಣತೀರ್ಥರ ಶಿಷ್ಯರಾದ ಮುದ್ಗಲ ವೇದವ್ಯಾಸಾಚಾರ್ಯರು ರಚಿಸಿದ ತಂತ್ರದೀಪಿಕಾ ಎಂಬ ವ್ಯಾಖ್ಯಾನ.
೭) ವರದರಾಜೀಯವ್ಯಾಖ್ಯಾನ ಭಾವಬೋಧ.
೮) ನಾರದಾನುಗೃಹೀತ ಶ್ರೀನಿವಾಸಾಚಾರ್ಯರು ರಚಿಸಿದ ವ್ಯಾಖ್ಯಾನ.
೯) ಗೂಢಕರ್ತೃಕವ್ಯಾಖ್ಯಾನ.
ಈ ಎಲ್ಲಾ ವ್ಯಾಖ್ಯಾನಗಳು ತಮ್ಮದೇ ಆದ ರೀತಿಯಲ್ಲಿ ಆಚಾರ್ಯರ ಭಾವವನ್ನು ತಿಳಿಯಲು
ಅಪೂರ್ವ ಕೊಡುಗೆಗಳನ್ನು ನೀಡಿವೆ. ಓದಿ ಅನುಭವಿಸಿದವರೇ ಬಲ್ಲರು ಇಲ್ಲಿರುವ ಸೊಬಗನ್ನು.
ಇಂತಹ ಉತ್ತಮವಾದ ಗ್ರಂಥವನ್ನು ನಿತ್ಯದಲ್ಲಿಯೂ ಪಠಿಸಿ ಅದರ ಅರ್ಥವನ್ನೂ ತಿಳಿದು,ಅದರಂತೆ ಬದುಕಲು ಮಹಾಪ್ರಯತ್ನವನ್ನು
ಮಾಡೋಣ.
ಶ್ರೀಕೃಷ್ಣಾರ್ಪಣಮಸ್ತು