E Books


ಶ್ರೀವಾದಿರಾಜಗುರುಸಾರ್ವಭೌಮವಿರಚಿತ ಶ್ರೀಲಕ್ಷ್ಮೀಶೋಭನ ಪದ
ಶೋಭಾನವೆನ್ನಿರೆ ಸುರರೊಳು ಸುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ ॥ ಶೋಭಾನೆ ॥
ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ
ಪಕ್ಷಿವಾಹನ್ನಗೆರಗುವೆ
ಪಕ್ಷಿವಾಹನ್ನಗೆರಗುವೆ ಅನುದಿನ
ರಕ್ಷಿಸಲಿ ನಮ್ಮ ವಧೂವರರ ॥ ಶೋಭಾನೆ ॥ ॥ 1 ॥
ಪಾಲಸಾಗರವನ್ನು ಲೀಲೆಯಲಿ ಕಡೆಯಲು
ಬಾಲೆ ಮಹಲಕ್ಷುಮಿ ಉದಿಸಿದಳು
ಬಾಲೆ ಮಹಲಕ್ಷುಮಿ ಉದಿಸಿದಳಾದೇವಿ
ಪಾಲಿಸಲಿ ನಮ್ಮ ವಧೂವರರ ॥ ಶೋಭಾನೆ ॥ ॥ 2 ॥
ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ
ಸುಮ್ಮನೆಯಾಗಿ ಮಲಗಿಪ್ಪ
ನಮ್ಮ ನಾರಾಯಣಗೂ ಈ ರಮ್ಮೆಗಡಿಗಡಿಗೂ
ಜನ್ಮವೆಂಬುದು ಅವತಾರ ॥ ಶೋಭಾನೆ ॥ ॥ 3 ॥
ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರ
ಅಂಬುಜವೆರಡು ಕರಯುಗದಿ
ಅಂಬುಜವೆರಡು ಕರಯುಗದಿ ಧರಿಸಿ ಪೀ-
ತಾಂಬರವುಟ್ಟು ಮೆರೆದಳು ॥ 4 ॥
ಒಂದು ಕರದಿಂದ ಅಭಯವನೀವಳೆ ಮ-
ತ್ತೊಂದು ಕೈಯಿಂದ ವರಗಳ
ಕುಂದಿಲ್ಲದಾನಂದಸಂದೋಹ ಉಣಿಸುವ
ಇಂದಿರೆ ನಮ್ಮ ಸಲಹಲಿ ॥ 5 ॥
ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು
ನಲಿವ ಕಾಲಂದುಗೆ ಘಲುಕೆನಲು
ನಳನಳಿಸುವ ಮುದ್ದುಮೊಗದ ಚೆಲುವೆ ಲಕ್ಷ್ಮೀ
ಸಲಹಲಿ ನಮ್ಮ ವಧೂವರರ ॥ 6 ॥
ರನ್ನದ ಮೊಲೆಗಟ್ಟು ಚಿನ್ನದಾಭರಣಗಳ
ಚೆನ್ನೆ ಮಹಲಕ್ಷುಮಿ ಧರಿಸಿದಳೆ
ಚೆನ್ನೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ
ಮನ್ನೆಯ ವಧೂವರರ ಸಲಹಲಿ ॥ 7 ॥
ಕುಂಭಕುಚದ ಮೇಲೆ ಇಂಬಿಟ್ಟ ಹಾರಗಳು
ತುಂಬಿಗುರುಳ ಮುಖಕಮಲ
ತುಂಬಿಗುರುಳ ಮುಖಕಮಲದ ಮಹಲಕ್ಷುಮಿ ಜಗ-
ದಂಬೆ ವಧೂವರರ ಸಲಹಲಿ ॥ 8 ॥
ಮುತ್ತಿನ ಓಲೆಯನ್ನಿಟ್ಟಳೆ ಮಹಲಕ್ಷ್ಮಿ
ಕಸ್ತೂರಿತಿಲಕ ಧರಿಸಿದಳೆ
ಕಸ್ತೂರಿತಿಲಕ ಧರಿಸಿದಳಾ ದೇವಿ ಸ-
ರ್ವತ್ರ ವಧೂವರರ ಸಲಹಲಿ ॥ ॥ 9 ॥
ಅಂಬುಜನಯನಗಳ ಬಿಂಬಾಧರದ ಶಶಿ
ಬಿಂಬದಂತೆಸೆವ ಮೂಗುತಿಮಣಿಯ ಶಶಿ-
ಬಿಂಬದಂತೆಸೆವ ಮೂಗುತಿಮಣಿಯ ಮಹಲಕ್ಷುಮಿ
ಉಂಬುದಕೀಯಲಿ ವಧೂವರರ್ಗೆ ॥ 10 ॥
ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ
ನೆತ್ತಿಯ ಮೇಲೆ ಧರಿಸಿದಳೆ
ನೆತ್ತಿಯ ಮೇಲೆ ಧರಿಸಿದಳಾ ದೇವಿ ತನ್ನ
ಭಕ್ತಿಯ ಜನರ ಸಲಹಲಿ ॥ 11 ॥
ಕುಂದಮಂದಾರ ಜಾಜಿಕುಸುಮಗಳ ವೃಂದವ
ಚೆಂದದ ತುರುಬಿಲಿ ತುರುಬಿದಳೆ
ಕುಂದಣವರ್ಣದ ಕೋಮಲೆ ಮಹಲಕ್ಷ್ಮಿ ಕೃಪೆ-
ಯಿಂದ ವಧೂವರರ ಸಲಹಲಿ ॥ 12 ॥
ಎಂದೆಂದೂ ಬಾಡದ ಅರವಿಂದಮಾಲೆಯ
ಇಂದಿರೆ ಪೊಳೆವ ಕೊರಳಲ್ಲಿ
ಇಂದಿರೆ ಪೊಳೆವ ಕೊರಳಲ್ಲಿ ಧರಿಸಿದಳೆ ಅವ-
ಳಿಂದು ವಧೂವರರ ಸಲಹಲಿ ॥ 13 ॥
ದೇವಾಂಗಪಟ್ಟೆಯ ಮೇಲು ಹೊದ್ದಿಕೆಯ
ಭಾವೆ ಮಹಲಕ್ಷುಮಿ ಧರಿಸಿದಳೆ
ಭಾವೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ
ಸೇವಕಜನರ ಸಲಹಲಿ ॥ 14 ॥
ಈ ಲಕ್ಷುಮಿದೇವಿಯ ಕಾಲುಂಗುರ ಘಲುಕೆನಲು
ಲೋಲಾಕ್ಷಿ ಮೆಲ್ಲನೆ ನಡೆತಂದಳು
ಸಾಲಾಗಿ ಕುಳ್ಳಿರ್ದ ಸುರರ ಸಭೆಯ ಕಂಡು
ಆಲೋಚಿಸಿದಳು ಮನದಲ್ಲಿ ॥ 15 ॥
ತನ್ನ ಮಕ್ಕಳ ಕುಂದ ತಾನೆ ಪೇಳುವುದಕ್ಕೆ
ಮನ್ನದಿ ನಾಚಿ ಮಹಲಕ್ಷುಮಿ
ತನ್ನಾಮದಿಂದಲಿ ಕರೆಯದೆ ಒಬ್ಬೊಬ್ಬರ
ಉನ್ನಂತ ದೋಷಗಳನೆಣಿಸಿದಳು ॥ 16 ॥
ಕೆಲವರು ತಲೆಯೂರಿ ತಪಗೈದು ಪುಣ್ಯವ
ಗಳಿಸಿದ್ದರೇನೂ ಫಲವಿಲ್ಲ
ಜ್ವಲಿಸುವ ಕೋಪದಿ ಶಾಪವ ಕೊಡುವರು
ಲಲನೆಯನಿವರು ಒಲಿಸುವರೆ? ॥ 17 ॥
ಎಲ್ಲ ಶಾಸ್ತ್ರಗಳೋದಿ ದುರ್ಲಭ ಜ್ಞಾನವ
ಕಲ್ಲಿಸಿ ಕೊಡುವ ಗುರುಗಳು
ಬಲ್ಲಿದ ಧನಕ್ಕೆ ಮರುಳಾಗಿ ಇಬ್ಬರು
ಸಲ್ಲದ ಪುರೋಹಿತಕ್ಕೊಳಗಾದರು ॥ 18 ॥
ಕಾಮನಿರ್ಜಿತನೊಬ್ಬ ಕಾಮಿನಿಗೆ ಸೋತೊಬ್ಬ
ಭಾಮಿನಿಯ ಹಿಂದೆ ಹಾರಿದವ ॥
ಕಾಮಾಂಧನಾಗಿ ಮುನಿಯ ಕಾಮಿನಿಗೈದಿದನೊಬ್ಬ
ಕಾಮದಿ ಗುರುತಲ್ಪಗಾಮಿಯೊಬ್ಬ ॥ 19 ॥
ನಶ್ವರೈಶ್ವರ್ಯವ ಬಯಸುವನೊಬ್ಬ ಪರ-
ರಾಶ್ರಯಿಸಿ ಬಾಳುವ ಈಶ್ವರನೊಬ್ಬ
ಹಾಸ್ಯವ ಮಾಡಿ ಹಲ್ಲುದುರಿಸಿಕೊಂಡವನೊಬ್ಬ ಅ-
ದೃಶ್ಯಾಂಘ್ರಿಯೊಬ್ಬ ಒಕ್ಕಣ್ಣನೊಬ್ಬ ॥ 20 ॥
ಮಾವನ ಕೊಂದೊಬ್ಬ ಮರುಳಾಗಿಹನು ಗಡ
ಹಾರ್ವನ ಕೊಂದೊಬ್ಬ ಬಳಲಿದ
ಜೀವರ ಕೊಂದೊಬ್ಬ ಕುಲಗೇಡೆಂದೆನಿಸಿದ
ಶಿವನಿಂದೊಬ್ಬ ಬಯಲಾದ ॥ 21 ॥
ಧರ್ಮ ಉಂಟೊಬ್ಬನಲಿ ಹೆಮ್ಮೆಯ ಹೆಸರಿಗೆ
ಅಮ್ಮಮ್ಮ ತಕ್ಕ ಗುಣವಿಲ್ಲ
ಕ್ಷಮ್ಮೆಯ ಬಿಟ್ಟೊಬ್ಬ ನರಕದಲಿ ಜೀವರ
ಮರ್ಮವ ಮೆಟ್ಟಿ ಕೊಲಿಸುವ ॥ 22 ॥
ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ
ಬಲ್ಲಿದಗಂಜಿ ಬರಿಗೈದ
ದುರ್ಲಭ ಮುಕ್ತಿಗೆ ದೂರವೆಂದೆನಿಸುವ ಪಾ-
ತಾಳತಳಕ್ಕೆ ಇಳಿದ ಗಡ ! ॥ 23 ॥
ಎಲ್ಲರಾಯುಷ್ಯವ ಶಿಂಶುಮಾರದೇವ
ಸಲ್ಲೀಲೆಯಿಂದ ತೊಲಗಿಸುವ
ಒಲ್ಲೆ ನಾನಿವರ ನಿತ್ಯ ಮುತ್ತೈದೆಯೆಂದು
ಬಲ್ಲವರೆನ್ನ ಭಜಿಸುವರು ॥ 24 ॥
ಪ್ರಕೃತಿಯ ಗುಣದಿಂದ ಕಟ್ಟುವಡೆದು ನಾನಾ
ವಿಕೃತಿಗೊಳಗಾಗಿ ಭವದಲ್ಲಿ
ಸುಖದುಃಖವುಂಬ ಬೊಮ್ಮಾದಿ ಜೀವರು
ದುಃಖಕೆ ದೂರಳೆನಿಪ ಎನಗೆಣೆಯೆ ॥ 25 ॥
ಒಬ್ಬನವನ ಮಗ ಮತ್ತೊಬ್ಬನವನ ಮೊಮ್ಮ
ಒಬ್ಬನವನಿಗೆ ಶಯನಾಹ
ಒಬ್ಬನವನ ಪೊರುವ ಮತ್ತಿಬ್ಬರವನಿಗಂಜಿ
ಅಬ್ಬರದಲಾವಾಗ ಸುಳಿವರು ॥ 26 ॥
ಒಬ್ಬನಾವನ ನಾಮಕಂಜಿ ಬೆಚ್ಚುವ ಗಡ
ಸರ್ಬರಿಗಾವ ಅಮೃತವ
ಸರ್ಬರಿಗಾವ ಅಮೃತವನುಣಿಸುವ ಅವ-
ನೊಬ್ಬನೆ ನಿರನಿಷ್ಟ ನಿರವದ್ಯ ॥ 27 ॥
ನಿರನಿಷ್ಟ ನಿರವದ್ಯ ಎಂಬ ಶ್ರುತ್ಯರ್ಥವ
ಒರೆದು ನೋಡಲು ನರಹರಿಗೆ
ನರಕಯಾತನೆ ಸಲ್ಲ ದುರಿತಾತಿದೂರನಿಗೆ
ಮರುಳ ಮನ ಬಂದಂತೆ ನುಡಿಯದಿರು ॥ 28 ॥
ಒಂದೊಂದು ಗುಣಗಳು ಇದ್ದಾವು ಇವರಲ್ಲಿ
ಸಂದಣಿಸಿವೆ ಬಹು ದೋಷ
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು
ಇಂದಿರೆ ಪತಿಯ ನೆನೆದಳು ॥ 29 ॥
ದೇವರ್ಷಿ ವಿಪ್ರರ ಕೊಂದು ತನ್ನುದರದೊಳಿಟ್ಟು
ತೀವಿರ್ದ ಹರಿಗೆ ದುರಿತವ
ಭಾವಜ್ಞರೆಂಬರೆ ಆಲದೆಲೆಯ ಮೇಲೆ
ಶಿವನ ಲಿಂಗವ ನಿಲಿಸುವರೆ ॥ 30 ॥
ಹಸಿ-ತೃಷೆ-ಜರೆ-ಮರಣ ರೋಗರುಜಿನಗಳೆಂಬ
ಅಸುರಪಿಶಾಚಿಗಳ ಭಯವೆಂಬ
ವ್ಯಸನ ಬರಬಾರದು ಎಂಬ ನಾರಾಯಣಗೆ
ಪಶು ಮೊದಲಾಗಿ ನೆನೆಯದು ॥ 31 ॥
ತಾ ದುಃಖಿಯಾದರೆ ಸುರರ ರತಿಯ ಕಳೆದು
ಮೋದವೀವುದಕೆ ಧರೆಗಾಗಿ
ಮಾಧವ ಬಾಹನೆ ಕೆಸರೊಳು ಮುಳುಗಿದವ ಪರರ
ಬಾಧಿಪ ಕೆಸರ ಬಿಡಿಸುವನೆ? ॥ 32 ॥
ಬೊಮ್ಮನಾಲಯದಲ್ಲಿ ಇದ್ದವಗೆ ಲಯವುಂಟೆ ?
ಜನ್ಮ ಲಯವಿಲ್ಲದವನಿಗೆ ?
ಅಮ್ಮಿಯನುಣಿಸಿದ್ದ ಯಶೋದೆಯಾಗಿದ್ದಳೆ ?
ಅಮ್ಮ ಇವಗೆ ಹಸಿತೃಷೆಯುಂಟೆ ? ॥ 33 ॥
ಆಗ ಭಕ್ಷ್ಯಭೋಜ್ಯವಿತ್ತು ಪೂಜಿಸುವ
ಯೋಗಿಗಳುಂಟೆ? ಧನಧಾನ್ಯ
ಆಗ ದೊರಕೊಂಬುದೆ? ಪಾಕ ಮಾಡುವ ವಹ್ನಿ ಮ-
ತ್ತಾಗಲೆಲ್ಲಿಹುದು? ವಿಚಾರಿಸಿರೊ ॥ 34 ॥
ರೋಗವನೀವ ವಾತ ಪಿತ್ತ ಶ್ಲೇಷ್ಮ
ಆಗ ಕೂಡುವುದೆ? ರಮೆಯೊಡನೆ
ಭೋಗಿಸುವವಗೆ ದುರಿತವ ನೆನೆವರೆ?
ಈ ಗುಣನಿಧಿಗೆ ಎಣೆಯುಂಟೆ? ॥ 35 ॥
ರಮ್ಮೆದೇವಿಯರನಪ್ಪಿಕೊಂಡಿಪ್ಪುದು
ರಮ್ಮೆಯರಸಗೆ ರತಿ ಕಾಣಿರೋ
ಅಮ್ಮೋಘವೀರ್ಯವು ಚಲಿಸಿದರೆ ಪ್ರಳಯದಲಿ
ಕುಮ್ಮಾರರ್ ಯಾಕೆ ಜನಿಸರು ? ॥ 36 ॥
ಏಕತ್ರ ನಿರ್ಣೀತ ಶಾಸ್ತ್ರಾರ್ಥ ಪರತ್ರಾಪಿ
ಬೇಕೆಂಬ ನ್ಯಾಯವ ತಿಳಿದುಕೋ
ಶ್ರೀಕೃಷ್ಣನೊಬ್ಬನೆ ಸರ್ವದೋಷಕ್ಕೆ ಸಿ-
ಲುಕನೆಂಬೋದು ಸಲಹಲಿಕೆ ॥ 37 ॥
ಎಲ್ಲ ಜಗವ ನುಂಗಿ ದಕ್ಕಿಸಿಕೊಂಡವಗೆ
ಸಲ್ಲದು ರೋಗರುಜಿನವು
ಬಲ್ಲ ವೈದ್ಯರ ಕೇಳಿ ಅಜೀರ್ತಿ ಮೂಲವಲ್ಲ-
ದಿಲ್ಲ ಸಮಸ್ತ ರುಜಿನವು ॥ 38 ॥
ಇಂಥಾ ಮೂರುತಿಯ ಒಳಗೊಂಬ ನರಕ ಬಹು-
ಭ್ರಾಂತ ನೀನೆಲ್ಲಿಂದ ತೋರಿಸುವೆಲೋ ?
ಸಂತೆಯ ಮರುಳ ಹೋಗೆಲೋ ನಿನ್ನ ಮಾತ
ಸಂತರು ಕೇಳಿ ಸೊಗಸರು ॥ 39 ॥
ಶ್ರೀನಾರಾಯಣರ ಜನನಿಜನಕರ
ನಾನೆಂಬ ವಾದಿ ನುಡಿಯೆಲೊ
ಜಾಣರದರಿಂದರಿಯ ಮೂಲರೂಪವ ತೋರಿ
ಶ್ರೀನಾರಸಿಂಹನ ಅವತಾರ ॥ 40 ॥
ಅಂಬುಧಿಯ ಉದಕದಲಿ ಒಡೆದು ಮೂಡಿದ ಕೂರ್ಮ
ಎಂಬ ಶ್ರೀಹರಿಯ ಪಿತನಾರು ?
ಎಂಬ ಶ್ರೀಹರಿಯ ಪಿತನಾರು ಅದರಿಂದ ಸ್ವ-
ಯಂಭುಗಳೆಲ್ಲ ಅವತಾರ ॥ 41 ॥
ದೇವಕಿಯ ಗರ್ಭದಲಿ ದೇವನವತರಿಸಿದ
ಭಾವವನು ಬಲ್ಲ ವಿವೇಕಿಗಳು
ಈ ವಸುಧೆಯೊಳಗೆ ಕೃಷ್ಣಗೆ ಜನ್ಮವ
ಆವ ಪರಿಯಲ್ಲಿ ನುಡಿವೆಯೊ? ॥ 42 ॥
ಆವಳಿಸುವಾಗ ಯಶೋದಾದೇವಿಗೆ
ದೇವ ತನ್ನೊಳಗೆ ಹುದುಗಿದ್ದ
ಭುವನವೆಲ್ಲವ ತೋರಿದ್ದುದಿಲ್ಲವೆ ?
ಆ ವಿಷ್ಣು ಗರ್ಭದೊಳಗಡಗುವನೆ ? ॥ 43 ॥
ಆನೆಯ ಮಾನದಲಿ ಅಡಗಿಸಿದವರುಂಟೆ ?
ಅನೇಕ ಕೋಟಿ ಅಜಾಂಡವ
ಅಣುರೋಮಕೂಪದಲಿ ಆಳ್ದ ಶ್ರೀಹರಿಯ
ಜನನಿಜಠರವು ಒಳಗೊಂಬುದೆ ॥ 44 ॥
ಅದರಿಂದ ಕೃಷ್ಣನಿಗೆ ಜನ್ಮವೆಂಬುದು ಸಲ್ಲ
ಮದನನಿವನ ಕುಮಾರನು
ಕದನದಿ ಕಣೆಗಳ ಇವನೆದೆಗೆಸೆವನೆ ?
ಸುದತೇರಿಗಿವನೆಂತು ಸಿಲುಕುವನೆ? ॥ 45 ॥
ಅದರಿಂದ ಕೃಷ್ಣನಿಗೆ ಪರನಾರೀಸಂಗವ ಕೋ-
ವಿದರಾದ ಬುಧರು ನುಡಿವರೆ?
ಸದರವೆ ಈ ಮಾತು ? ಸರ್ವವೇದಂಗಳು
ಮುದದಿಂದ ತಾವು ಸ್ತುತಿಸುವವು ॥ 46 ॥
ಎಂದ ಭಾಗವತದ ಚೆಂದದ ಮಾತನು
ಮಂದ ಮಾನವ ಮನಸಿಗೆ
ತಂದುಕೊ ಜಗಕೆ ಕೈವಲ್ಯವೀವ ಮು-
ಕುಂದಗೆ ಕುಂದು ಕೊರತೆ ಸಲ್ಲ ॥ 47 ॥
ಹತ್ತು ವರ್ಷದ ಕೆಳಗೆ ಮಕ್ಕಳಾಟಿಕೆಯಲ್ಲಿ
ಚಿತ್ತ ಸ್ತ್ರೀಯರಿಗೆ ಎರಗುವುದೆ ?
ಅರ್ತಿಯಿಂದರ್ಚಿಸಿದ ಗೋಕುಲದ ಕನ್ಯೆಯರ
ಸತ್ಯಸಂಕಲ್ಪ ಬೆರೆತಿದ್ದ ॥ 48 ॥
ಹತ್ತು ಮತ್ತಾರು ಸಾಸಿರ ಸ್ತ್ರೀಯರಲ್ಲಿ
ಹತ್ತು ಹತ್ತೆನಿಪ ಕ್ರಮದಿಂದ
ಪುತ್ರರ ವೀರ್ಯದಲಿ ಸೃಷ್ಟಿಸಿದವರುಂಟೆ?
ಅರ್ತಿಯ ಸೃಷ್ಟಿ ಹರಿಗಿದು ॥ 49 ॥
ರೋಮ ರೋಮ ಕೂಪ ಕೋಟಿವೃಕಂಗಳ
ನಿರ್ಮಿಸಿ ಗೋಪಾಲರ ತೆರಳಿಸಿದ
ನಮ್ಮ ಶ್ರೀಕೃಷ್ಣನು ಮಕ್ಕಳ ಸೃಜಿಸುವ ಮ-
ಹಿಮ್ಮೆ ಬಲ್ಲವರಿಗೆ ಸಲಹಲಿಕೆ ॥ 50 ॥
ಮಣ್ಣನೇಕೆ ಮೆದ್ದೆಯೆಂಬ ಯಶೋದೆಗೆ
ಸಣ್ಣ ಬಾಯೊಳಗೆ ಜಗಂಗಳ
ಕಣ್ಣಾರೆ ತೋರಿದ ನಮ್ಮ ಶ್ರೀಕೃಷ್ಣನ
ಘನ್ನತೆ ಬಲ್ಲವರಿಗೆ ಸಲಹಲಿಕೆ ॥ 51 ॥
ನಾರದ-ಸನಕಾದಿ ಮೊದಲಾದ ಯೋಗಿಗಳು
ನಾರಿಯರಿಗೆ ಮರುಳಾದರೆ
ಓರಂತೆ ಶ್ರೀಕೃಷ್ಣನಡಿಗಡಿಗೆರಗುವರೆ?
ಆರಾಧಿಸುತ್ತ ಭಜಿಸುವರೆ? ॥ 52 ॥
ಅಂಬುಜಸಂಭವ ತ್ರಿಯಂಬಕ ಮೊದಲಾದ
ನಂಬಿದವರಿಗೆ ವರವಿತ್ತ
ಸಂಭ್ರಮದ ಸುರರು ಎಳ್ಳಷ್ಟು ಕೋಪಕ್ಕೆ
ಇಂಬಿದ್ದವರಿವನ ಭಜಿಸುವರೆ? ॥ 53 ॥
ಆವನಂಗುಷ್ಠವ ತೊಳೆದ ಗಂಗಾದೇವಿ
ಪಾವನಳೆನಿಸಿ ಮೆರೆಯಳೆ ?
ಜೀವನ ಸೇರುವ ಪಾಪವ ಕಳೆವಳು
ಈ ವಾಸುದೇವಗೆ ಎಣೆಯುಂಟೆ ? ॥ 54 ॥
ಕಿಲ್ಬಿಷವಿದ್ದರೆ ಅಗ್ರಪೂಜೆಯನು
ಸರ್ಬರಾಯರ ಸಭೆಯೊಳಗೆ
ಉಬ್ಬಿದ ಮನದಿಂದ ಧರ್ಮಜ ಮಾಡುವನೆ ?
ಕೊಬ್ಬದಿರೆಲೊ ಪರವಾದಿ ॥ 55 ॥
ಸಾವಿಲ್ಲದ ಹರಿಗೆ ನರಕಯಾತನೆ ಸಲ್ಲ
ಜೀವಂತರಿಗೆ ನರಕದಲಿ
ನೋವನೀವನೆ ನಿಮ್ಮ ಯಮದೇವನು
ಗೋವ ನೀ ಹರಿಯ ಗುಣವರಿಯ ! ॥ 56 ॥
ನರಕವಾಳುವ ಯಮಧರ್ಮರಾಯ ತನ್ನ
ನರಜನ್ಮದೊಳಗೆ ಪೊರಳಿಸಿ
ಮರಳಿ ತನ್ನರಕದಲಿ ಪೊರಳಿಸಿ ಕೊಲುವನು ?
ಕುರು ನಿನ್ನ ಕುಹಕ ಕೊಳದಲ್ಲಿ ॥ 57 ॥
ಬೊಮ್ಮನ ನೂರು ವರುಷ ಪರಿಯಂತ ಪ್ರಳಯದಲಿ
ಸುಮ್ಮನೆಯಾಗಿ ಮಲಗಿರ್ದ
ನಮ್ಮ ನಾರಾಯಣಗೆ ಹಸಿ-ತೃಷೆ-ಜರೆ-ಮರಣ ದು-
ಷ್ಕರ್ಮ ದುಃಖಂಗಳು ತೊಡಸುವರೆ ? ॥ 58 ॥
ರಕ್ಕಸರಸ್ತ್ರಗಳಿಂದ ಗಾಯವಡೆಯದ
ಅಕ್ಷಯಕಾಯದ ಸಿರಿಕೃಷ್ಣ
ತುಚ್ಛ ಯಮಭಟರ ಶಸ್ತ್ರಕಳುಕುವನಲ್ಲ
ಹುಚ್ಚ ನೀ ಹರಿಯ ಗುಣವರಿಯ ॥ 59 ॥
ಕಿಚ್ಚ ನುಂಗಿದನು ನಮ್ಮ ಶ್ರೀಕೃಷ್ಣನು
ತುಚ್ಛ ನರಕದೊಳು ಅನಲನಿಗೆ
ಬೆಚ್ಚುವನಲ್ಲ ಅದರಿಂದಿವಗೆ ನರಕ
ಮೆಚ್ಚುವರಲ್ಲ ಬುಧರೆಲ್ಲ ॥ 60 ॥
ಮನೆಯಲ್ಲಿ ಕ್ಷಮೆಯ ತಾಳ್ದ ವೀರಭಟ
ರಣರಂಗದಲ್ಲಿ ಕ್ಷಮಿಸುವನೆ
ಅಣುವಾಗಿ ನಮ್ಮ ಹಿತಕೆ ಮನದೊಳಗಿನ ಕೃಷ್ಣ
ಮುನಿವ ಕಾಲಕ್ಕೆ ಮಹತ್ತಾಹ ॥ 61 ॥
ತಾಯ ಪೊಟ್ಟೆಯಿಂದ ಮೂಲರೂಪವ ತೋರಿ
ಆಯುಧಸಹಿತ ಪೊರವಂಟ
ನ್ಯಾಯಕೋವಿದರು ಪುಟ್ಟಿದನೆಂಬರೆ ?
ಬಾಯಿಗೆ ಬಂದಂತೆ ಬೊಗಳದಿರು ॥ 62 ॥
ಉಟ್ಟ ಪೀತಾಂಬರ ತೊಟ್ಟ ಭೂಷಣಂಗಳು
ಇಟ್ಟ ನವರತ್ನದ ಮುಕುಟವು
ಮೆಟ್ಟಿದ ಕುರುಹ ಎದೆಯಲ್ಲಿ ತೋರಿದ ಶ್ರೀ-
ವಿಠ್ಠಲ ಪುಟ್ಟಿದನೆನಬಹುದೆ ? ॥ 63 ॥
ಋಷಭಹಂಸಮೇಷಮಹಿಷಮೂಷಕವಾಹನವೇರಿ ಮಾ-
ನಿಸರಂತೆ ಸುಳಿವ ಸುರರೆಲ್ಲ
ಎಸೆವ ದೇವೇಶಾನರ ಸಹಸಕ್ಕೆ ಮಣಿದರು
ಕುಸುಮನಾಭನಿಗೆ ಸರಿಯುಂಟೆ ? ॥ 64 ॥
ಒಂದೊಂದು ಗುಣಗಳು ಇದ್ದಾವು ಇವರಲ್ಲಿ
ಸಂದಣಿಸಿವೆ ಬಹುದೋಷ
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು
ಇಂದಿರೆ ಪತಿಯ ನೆನೆದಳು ॥ 65 ॥
ಇಂತು ಚಿಂತಿಸಿ ರಮೆ ಸಂತ ರಾಮನ ಪದವ
ಸಂತೋಷಮನದಿ ನೆನೆವುತ್ತ
ಸಂತೋಷಮನದಿ ನೆನೆವುತ್ತ ತನ್ನ ಶ್ರೀ-
ಕಾಂತನಿದ್ದೆಡೆಗೆ ನಡೆದಳು ॥ 66 ॥
ಕಂದರ್ಪಕೋಟಿಗಳ ಗೆಲುವ ಸೌಂದರ್ಯದ
ಚೆಂದವಾಗಿದ್ದ ಚೆಲುವನ
ಇಂದಿರೆ ಕಂಡು ಇವನೆ ತನಗೆ ಪತಿ -
ಯೆಂದವನ ಬಳಿಗೆ ನಡೆದಳು ॥ 67 ॥
ಇತ್ತರದ ಸುರರ ಸುತ್ತ ನೋಡುತ್ತ ಲಕ್ಷ್ಮಿ
ಚಿತ್ತವ ಕೊಡದೆ ನಸುನಗುತ
ಚಿತ್ತವ ಕೊಡದೆ ನಸುನಗುತ ಬಂದು ಪುರು-
ಷೋತ್ತಮನ ಕಂಡು ನಮಿಸಿದಳು ॥ 68 ॥
ನಾನಾಕುಸುಮಗಳಿಂದ ಮಾಡಿದ ಮಾಲೆಯ
ಶ್ರೀನಾರಿ ತನ್ನ ಕರದಲ್ಲಿ
ಪೀನಕಂಧರದ ತ್ರಿವಿಕ್ರಮರಾಯನ ಕೊರ-
ಳಿನ ಮೇಲಿಟ್ಟು ನಮಿಸಿದಳು ॥ 69 ॥
ಉಟ್ಟ ಪೊಂಬಟ್ಟೆಯ ತೊಟ್ಟಾಭರಣಗಳು
ಇಟ್ಟ ನವರತ್ನದ ಮುಕುಟವು
ದುಷ್ಟಮರ್ದನನೆಂಬ ಕಡೆಯ ಪೆಂಡೆಗಳ
ವಟ್ಟಿದ್ದ ಹರಿಗೆ ವಧುವಾದಳು ॥ 70 ॥
ಕೊಂಬು ಚೆಂಗಹಳೆಗಳು ತಾಳಮದ್ದಳೆಗಳು
ತಂಬಟೆ ಭೇರಿ ಪಟಹಗಳು
ಭೊಂ ಭೊಂ ಎಂಬ ಶಂಖ ಡೊಳ್ಳು ಮೌರಿಗಳು
ಅಂಬುಧಿಯ ಮನೆಯಲ್ಲೆಸೆದವು ॥ 71 ॥
ಅರ್ಘ್ಯ ಪಾದ್ಯಾಚಮನ ಮೊದಲಾದ ಷೋಡಶ-
ನರ್ಘ್ಯ ಪೂಜೆಯಿತ್ತನಳಿಯಂಗೆ
ಒಗ್ಗಿದ ಮನದಿಂದ ಧಾರೆಯೆರೆದನೆ ಸಿಂಧು
ಸದ್ಗತಿಯಿತ್ತು ಸಲಹೆಂದ ॥ 72 ॥
ವೇದೋಕ್ತಮಂತ್ರ ಪೇಳಿ ವಸಿಷ್ಠ-ನಾರದ ಮೊದ-
ಲಾದ ಮುನೀಂದ್ರರು ಮುದದಿಂದ
ವಧೂವರರ ಮೇಲೆ ಶೋಭನದಕ್ಷತೆಯನು
ಮೋದವೀವುತ್ತ ತಳಿದರು ॥ 73 ॥
ಸಂಭ್ರಮದಿಂದಂಬರದಿ ದುಂದುಭಿ ಮೊಳಗಲು
ತುಂಬುರು ನಾರದರು ತುತಿಸುತ್ತ
ತುಂಬುರುನಾರದರು ತುತಿಸುತ್ತ ಪಾಡಿದರು ಪೀ-
ತಾಂಬರಧರನ ಮಹಿಮೆಯ ॥ 74 ॥
ದೇವನಾರಿಯರೆಲ್ಲ ಬಂದೊದಗಿ ಪಾಠಕರು
ಓವಿ ಪಾಡುತ್ತ ಕುಣಿದರು
ದೇವತರುವಿನ ಹೂವಿನ ಮಳೆಗಳ
ಶ್ರೀವರನ ಮೇಲೆ ಕರೆದರು ॥ 75 ॥
ಮುತ್ತುರತ್ನಗಳಿಂದ ತೆತ್ತಿಸಿದ ಹಸೆಯ ನವ-
ರತ್ನಮಂಟಪದಿ ಪಸರಿಸಿ ನವ-
ರತ್ನಮಂಟಪದಿ ಪಸರಿಸಿ ಕೃಷ್ಣನ
ಮುತ್ತೈದೆಯರೆಲ್ಲ ಕರೆದರು ॥ 76 ॥
ಶೇಷಶಯನನೆ ಬಾ ದೋಷದೂರನೆ ಬಾ
ಭಾಸುರಕಾಯ ಹರಿಯೆ ಬಾ
ಭಾಸುರಕಾಯ ಹರಿಯೆ ಬಾ ಶ್ರೀಕೃಷ್ಣ ವಿ-
ಲಾಸದಿಂದೆಮ್ಮ ಹಸೆಗೆ ಬಾ ॥ 77 ॥
ಕಂಜಲೋಚನನೆ ಬಾ ಮಂಜುಳಮೂರ್ತಿಯೆ ಬಾ
ಕುಂಜರವರದಾಯಕನೆ ಬಾ
ಕುಂಜರವರದಾಯಕನೆ ಬಾ ಶ್ರೀಕೃಷ್ಣ ನಿ-
ರಂಜನ ನಮ್ಮ ಹಸೆಗೆ ಬಾ ॥ 78 ॥
ಆದಿಕಾಲದಲ್ಲಿ ಆಲದೆಲೆಯ ಮೇಲೆ
ಶ್ರೀದೇವಿಯರೊಡನೆ ಪವಡಿಸಿದ
ಶ್ರೀದೇವಿಯರೊಡನೆ ಪವಡಿಸಿದ ಶ್ರೀಕೃಷ್ಣ
ಮೋದದಿಂದೆಮ್ಮ ಹಸೆಗೆ ಬಾ ॥ 79 ॥
ಆದಿಕಾರಣನಾಗಿ ಆಗ ಮಲಗಿದ್ದು
ಮೋದ ಜೀವರ ತನ್ನ ಉದರದಲಿ
ಮೋದ ಜೀವರ ತನ್ನುದರದಲಿ ಇಂಬಿಟ್ಟ ಅ-
ನಾದಿಮೂರುತಿಯೆ ಹಸೆಗೆ ಬಾ ॥ 80 ॥
ಚಿನ್ಮಯವೆನಿಪ ನಿಮ್ಮ ಮನೆಗಳಲ್ಲಿ ಜ್ಯೋ-
ತಿರ್ಮಯವಾದ ಪದ್ಮದಲ್ಲಿ
ರಮ್ಮೆಯರೊಡಗೂಡಿ ರಮಿಸುವ ಶ್ರೀಕೃಷ್ಣ
ನಮ್ಮ ಮನೆಯ ಹಸೆಗೆ ಬಾ ॥ 81 ॥
ನಾನಾವತಾರದಲಿ ನಂಬಿದ ಸುರರಿಗೆ
ಆನಂದವೀವ ಕರುಣಿ ಬಾ
ಆನಂದವೀವ ಕರುಣಿ ಬಾ ಶ್ರೀಕೃಷ್ಣ
ಶ್ರೀನಾರಿಯರೊಡನೆ ಹಸೆಗೆ ಬಾ ॥ 82 ॥
ಬೊಮ್ಮನ ಮನೆಯಲ್ಲಿ ರನ್ನಪೀಠದಿ ಕುಳಿತು
ಒಮ್ಮನದಿ ನೇಹವ ಮಾಡುವ
ನಿರ್ಮಲಪೂಜೆಯ ಕೈಗೊಂಡ ಶ್ರೀಕೃಷ್ಣ ಪರ-
ಬೊಮ್ಮಮೂರುತಿಯೆ ಹಸೆಗೆ ಬಾ ॥ 83 ॥
ಮುಖ್ಯಪ್ರಾಣನ ಮನೆಯಲ್ಲಿ ಭಾರತಿಯಾಗ-
ಲಿಕ್ಕಿ ಬಡಿಸಿದ ರಸಾಯನವ
ಸಕ್ಕರೆಗೂಡಿದ ಪಾಯಸ ಸವಿಯುವ
ರಕ್ಕಸವೈರಿಯೆ ಹಸೆಗೆ ಬಾ ॥ 84 ॥
ರುದ್ರನ ಮನೆಯಲ್ಲಿ ರುದ್ರಾಣಿದೇವಿಯರು
ಭದ್ರಮಂಟಪದಿ ಕುಳ್ಳಿರಿಸಿ
ಸ್ವಾದ್ವನ್ನಗಳನು ಬಡಿಸಲು ಕೈಗೊಂಬ
ಮುದ್ದು ನರಸಿಂಹ ಹಸೆಗೆ ಬಾ ॥ 85 ॥
ಗರುಡನ ಮೇಲೇರಿ ಗಗನಮಾರ್ಗದಲ್ಲಿ
ತರತರದಿ ಸ್ತುತಿಪ ಸುರಸ್ತ್ರೀಯರ
ಮೆರೆವ ಗಂಧರ್ವರ ಗಾನವ ಸವಿಯುವ
ನರಹರಿ ನಮ್ಮ ಹಸೆಗೆ ಬಾ ॥ 86 ॥
ನಿಮ್ಮಣ್ಣನ ಮನೆಯ ಸುಧರ್ಮಸಭೆಯಲ್ಲಿ
ಉಮ್ಮೆಯರಸ ನಮಿಸಿದ
ಧರ್ಮರಕ್ಷಕನೆನಿಪ ಕೃಷ್ಣ ಕೃಪೆಯಿಂದ ಪ-
ರಮ್ಮ ಮೂರುತಿಯೆ ಹಸೆಗೆ ಬಾ ॥ 87 ॥
ಇಂದ್ರನ ಮನೆಗ್ಹೋಗಿ ಅದಿತಿಗೆ ಕುಂಡಲವಿತ್ತು
ಅಂದದ ಪೂಜೆಯ ಕೈಗೊಂಡು
ಅಂದದ ಪೂಜೆಯ ಕೈಗೊಂಡು ಸುರತರುವ
ಇಂದಿರೆಗಿತ್ತ ಹರಿಯೆ ಬಾ ॥ 88 ॥
ನಿಮ್ಮ ನೆನೆವ ಮುನಿಹೃದಯದಲಿ ನೆಲಸಿದ
ಧರ್ಮರಕ್ಷಕನೆನಿಸುವ
ಸಮ್ಮತವಾಗಿದ್ದ ಪೂಜೆಯ ಕೈಗೊಂಬ ನಿ-
ಸ್ಸೀಮಮಹಿಮ ಹಸೆಗೆ ಬಾ ॥ 89 ॥
ಮುತ್ತಿನ ಸತ್ತಿಗೆ ನವರತ್ನದ ಚಾಮರ
ಸುತ್ತ ನಲಿವ ಸುರಸ್ತ್ರೀಯರ
ನೃತ್ಯವ ನೋಡುವ ಚಿತ್ರವಾದ್ಯಂಗಳ ಸಂ-
ಪತ್ತಿನ ಹರಿಯೆ ಹಸೆಗೆ ಬಾ ॥ 90 ॥
ಎನಲು ನಗುತ ಬಂದು ಹಸೆಯ ಮೇಲೆ
ವನಿತೆ ಲಕ್ಷುಮಿಯೊಡಗೂಡಿ
ಅನಂತವೈಭವದಿ ಕುಳಿತ ಕೃಷ್ಣಗೆ ನಾಲ್ಕು
ದಿನದುತ್ಸವವ ನಡೆಸಿದರು ॥ 91 ॥
ಅತ್ತೇರೆನಿಪ ಗಂಗೆ ಯಮುನೆ ಸರಸ್ವತಿ ಭಾ-
ರತ್ತಿ ಮೊದಲಾದ ಸುರಸ್ತ್ರೀಯರು
ಮುತ್ತಿನಾಕ್ಷತೆಯನು ಶೋಭನವೆನುತ ತ-
ಮ್ಮರ್ತಿಯಳಿಯಗೆ ತಳಿದರು ॥ 92 ॥
ರತ್ನದಾರತಿಗೆ ಸುತ್ತಮುತ್ತನೆ ತುಂಬಿ
ಮುತ್ತೈದೆಯರೆಲ್ಲ ಧವಳದ
ಮುತ್ತೈದೆಯರೆಲ್ಲ ಧವಳದ ಪದನ ಪಾ-
ಡುತ್ತಲೆತ್ತಿದರೆ ಸಿರಿವರಗೆ ॥ 93 ॥
ಬೊಮ್ಮ ತನ್ನರಸಿ ಕೂಡೆ ಬಂದೆರಗಿದ
ಉಮ್ಮೆಯರಸ ನಮಿಸಿದ
ಅಮ್ಮರರೆಲ್ಲರು ಬಗೆಬಗೆ ಉಡುಗೊರೆಗಳ
ರಮ್ಮೆಯರಸಗೆ ಸಲಿಸಿದರು ॥ 94 ॥
ಸತ್ಯಲೋಕದ ಬೊಮ್ಮ ಕೌಸ್ತುಭರತ್ನವನಿತ್ತ
ಮುಕ್ತಸುರರು ಮುದದಿಂದ
ಮುತ್ತಿನ ಕಂಠೀಸರ ಮುಖ್ಯಪ್ರಾಣನಿತ್ತ
ಮಸ್ತಕಮಣಿಯ ಶಿವನಿತ್ತ ॥ 95 ॥
ತನ್ನರಸಿ ಕೂಡೆ ಸವಿನುಡಿ ನುಡಿವಾಗ ವ-
ದನ್ನದಲ್ಲಿದ್ದಗ್ನಿ ಕೆಡದಂತೆ
ವಹ್ನಿಪ್ರತಿಷ್ಠೆಯ ಮಾಡಿ ಅವನೊಳಗಿದ್ದ
ತನ್ನಾಹುತಿಯಿತ್ತ ಸುರರಿಗೆ ॥ 96 ॥
ಕೊಬ್ಬಿದ ಖಳರೋಡಿಸಿ ಅಮೃತಾನ್ನ ಊಟಕ್ಕೆ
ಉಬ್ಬಿದ ಹರುಷದಿ ಉಣಿಸಲು
ಉಬ್ಬಿದ ಹರುಷದಿ ಉಣಿಸಬೇಕೆಂದು ಸಿಂಧು
ಸರ್ಬರಿಗೆಡೆಯ ಮಾಡಿಸಿದ ॥ 97 ॥
ಮಾವನ ಮನೆಯಲ್ಲಿ ದೇವರಿಗೌತಣವ ದಾ-
ನವರು ಕೆಡಿಸದೆ ಬಿಡರೆಂದು ದಾ-
ನವರು ಕೆಡಿಸದೆ ಬಿಡರೆಂದು ಶ್ರೀಕೃಷ್ಣ
ದೇವ ಸ್ತ್ರೀವೇಷವ ಧರಿಸಿದ ॥ 98 ॥
ತನ್ನ ಸೌಂದರ್ಯದಿಂದನ್ನಂತಮಡಿಯಾದ ಲಾ-
ವಣ್ಯದಿ ಮೆರೆವ ನಿಜಪತಿಯ
ಹೆಣ್ಣುರೂಪವ ಕಂಡು ಕನ್ಯೆ ಮಹಲಕ್ಷುಮಿ ಇವ-
ಗನ್ಯರೇಕೆಂದು ಬೆರಗಾದಳು ॥ 99 ॥
ಲಾವಣ್ಯಮಯವಾದ ಹರಿಯ ಸ್ತ್ರೀವೇಷಕ್ಕೆ
ಭಾವುಕರೆಲ್ಲ ಮರುಳಾಗೆ
ಮಾವರ ಸುಧೆಯ ಕ್ರಮದಿಂದ ಬಡಿಸಿ ತನ್ನ
ಸೇವಕ ಸುರರಿಗುಣಿಸಿದ ॥ 100 ॥
ನಾಗನ ಮೇಲೆ ತಾ ಮಲಗಿದ್ದಾಗ
ಆಗಲೆ ಜಗವ ಜತನದಿ
ಆಗಲೆ ಜಗವ ಜತನದಿ ಧರಿಸೆಂದು
ನಾಗಬಲಿಯ ನಡೆಸಿದ ॥ 101 ॥
ಕ್ಷುಧೆಯ ಕಳೆವ ನವರತ್ನದ ಮಾಲೆಯ
ಮುದದಿಂದ ವಾರಿಧಿ ವಿಧಿಗಿತ್ತ
ಚದುರಹಾರವ ವಾಯುದೇವರಿಗಿತ್ತ
ವಿಧುವಿನ ಕಲೆಯ ಶಿವಗಿತ್ತ ॥ 102 ॥
ಶಕ್ರ ಮೊದಲಾದ ದಿಕ್ಪಾಲಕರಿಗೆ
ಸೊಕ್ಕಿದ ಚೌದಂತ ಗಜಂಗಳ
ಉಕ್ಕಿದ ಮನದಿಂದ ಕೊಟ್ಟ ವರುಣ ಮದು-
ಮಕ್ಕಳಾಯುಷ್ಯವ ಬೆಳೆಸೆಂದ ॥ 103 ॥
ಮತ್ತೆ ದೇವೇಂದ್ರಗೆ ಪಾರಿಜಾತವನಿತ್ತ
ಚಿತ್ತವ ಸೆಳೆವಪ್ಸರಸ್ತ್ರೀಯರ
ಹತ್ತು ಸಾವಿರ ಕೊಟ್ಟ ವರುಣದೇವ ಹರಿ-
ಭಕ್ತಿಯ ಮನದಿ ಬೆಳೆಸೆಂದ ॥ 104 ॥
ಪೊಳೆವ ನವರತ್ನದ ರಾಶಿಯ ತೆಗೆತೆಗೆದು
ಉಳಿದ ಅಮರರಿಗೆ ಸಲಿಸಿದ
ಉಳಿದ ಅಮರರಿಗೆ ಸಲಿಸಿದ ಸಮುದ್ರ
ಕಳುಹಿದನವರವರ ಮನೆಗಳಿಗೆ ॥ 105 ॥
ಉನ್ನಂತ ನವರತ್ನಮಯವಾದ ಅರಮನೆಯ
ಚೆನ್ನೇಮಗಳಿಂದ ವಿರಚಿಸಿ
ತನ್ನ ಅಳಿಯಗೆ ಸ್ಥಿರವಾಗಿ ಮಾಡಿಕೊಟ್ಟು
ಇನ್ನೊಂದು ಕಡೆಯಡಿ ಇಡದಂತೆ ॥ 106 ॥
ಹಯವದನ ತನ್ನ ಪ್ರಿಯಳಾದ ಲಕ್ಷುಮಿಗೆ
ಜಯವಿತ್ತ ಕ್ಷೀರಾಂಬುಧಿಯಲ್ಲಿ
ಜಯವಿತ್ತ ಕ್ಷೀರಾಂಬುಧಿಯಲ್ಲಿ ಶ್ರೀಕೃಷ್ಣ
ದಯದಿ ನಮ್ಮೆಲ್ಲರ ಸಲಹಲಿ ॥ 107 ॥
ಈ ಪದನ ಮಾಡಿದ ವಾದಿರಾಜೇಂದ್ರಮುನಿಗೆ
ಶ್ರೀಪತಿಯಾದ ಹಯವದನ
ತಾಪವ ಕಳೆದು ತನ್ನ ಶ್ರೀಚರಣ ಸ-
ಮೀಪದಲ್ಲಿಟ್ಟು ಸಲಹಲಿ ॥ 108 ॥
ಇಂತು ಸ್ವಪ್ನದಲ್ಲಿ ಕೊಂಡಾಡಿಸಿಕೊಂಡ ಲಕ್ಷ್ಮೀ-
ಕಾಂತನ ಕಂದನೆನಿಸುವ
ಸಂತರ ಮೆಚ್ಚಿನ ವಾದಿರಾಜೇಂದ್ರ ಮುನಿ
ಪಂಥದಿ ಪೇಳಿದ ಪದವಿದು ॥ 109 ॥
ಶ್ರೀಯರಸ ಹಯವದನಪ್ರಿಯ ವಾದಿರಾಜ-
ರಾಯ ರಚಿಸಿದ ಪದವಿದು
ಆಯುಷ್ಯ ಭವಿಷ್ಯ ದಿನದಿನಕೆ ಹೆಚ್ಚುವುದು ನಿ-
ರಾಯಾಸದಿಂದ ಸುಖಿಪರು ॥ 110 ॥
ಬೊಮ್ಮನ ದಿನದಲ್ಲಿ ಒಮ್ಮೊಮ್ಮೆ ಈ ಮದುವೆ
ಕ್ರಮ್ಮದಿ ಮಾಡಿ ವಿನೋದಿಸುವ
ನಮ್ಮ ನಾರಾಯಣಗೂ ಈ ರಮ್ಮೆಗಡಿಗಡಿಗೂ ಅಸು-
ರಮ್ಮೋಹನವೆ ನರನಟನೆ ॥ 111 ॥
ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ
ಮದುಮಕ್ಕಳಿಗೆ ಮುದವಹುದು
ವಧುಗಳಿಗೆ ವಾಲೆಭಾಗ್ಯ ದಿನದಿನಕೆ ಹೆಚ್ಚುವುದು
ಮದನನಯ್ಯನ ಕೃಪೆಯಿಂದ ॥ 112 ॥
ಶೋಭಾನವೆನ್ನಿರೆ ಸುರರೊಳು ಸುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ ॥ ಶೋಭಾನೆ ॥ ॥ 113 ॥
॥ ಇತಿ ಶ್ರೀಮದ್ವಾದಿರಾಜಯತಿವಿರಚಿತ ಶ್ರೀಲಕ್ಷ್ಮೀಶೋಭನಪದ ॥
-----------------
ಆರತಿ
ಶೋಭಾನವೆನ್ನಿರೆ ಸುರರೊಳು ಸುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ ॥ ಶೋಭಾನೆ ॥ ॥ ಪ ॥
ಹಡಗಿನೊಳಗಿಂದ ಬಂದ ಕಡು ಮುದ್ದು ಶ್ರೀಕೃಷ್ಣಗೆ
ಕಡೆಗೋಲು ನೇಣ ಪಿಡಿದನೆ ॥
ಕಡಗೋಲು ನೇಣ ಪಿಡಿದನೆ ದೇವಕಿಯ
ತನಯಗಾರುತಿಯ ಬೆಳಗಿರೆ ॥ ಶೋಭಾನೆ ॥
ಆಚಾರ್ಯರ ಕೈಯಿಂದ ಅಧಿಕಪೂಜೆಯಗೊಂಬ
ಕಾಂತೆ ಲಕ್ಷ್ಮಿಯ ಅರಸನೆ ॥
ಕಾಂತೆ ಲಕ್ಷ್ಮಿಯ ಅರಸನೆ ಶ್ರೀಕೃಷ್ಣಗೆ
ಕಾಂಚನದಾರತಿಯ ಬೆಳಗಿರೆ ॥ ಶೋಭಾನೆ ॥
ಮಧ್ವಸರೋವರದಿ ಶುದ್ಧ ಪೂಜೆಯ ಕೊಂಬ
ಮುದ್ದು ರುಕ್ಮಿಣಿಯರಸನೆ ॥
ಮುದ್ದು ರುಕ್ಮಿಣಿಯ ಅರಸನೆ ಶ್ರೀಕೃಷ್ಣಗೆ
ಮುತ್ತಿನಾರತಿಯ ಬೆಳಗಿರೆ ॥ ಶೋಭಾನೆ ॥
ಪಾಂಡವರ ಪ್ರಿಯನೆ ಚಾಣೂರಮರ್ದನನೆ
ಸತ್ಯಭಾಮೆಯ ಅರಸನೆ ॥
ಸತ್ಯಭಾಮೆಯ ಅರಸನೆ ಶ್ರೀಕೃಷ್ಣಗೆ
ನವರತ್ನದಾರತಿಯ ಬೆಳಗಿರೆ ॥ ಶೋಭಾನೆ ॥
ಸೋದರ ಮಾವನ ಮಧುರೆಲಿ ಮಡುಹಿದ
ತಾಯಿಯ ಸೆರೆಯ ಬಿಡಿಸಿದ ॥
ತಾಯಿಯ ಸೆರೆಯ ಬಿಡಿಸಿದ ಹಯವದನ
ದೇವಗಾರತಿಯ ಬೆಳಗಿರೆ ॥ ಶೋಭಾನೆ ॥
ಮುತ್ತೈದೆಯರೆಲ್ಲರೂ ಮುತ್ತಿನಾರುತಿ ಎತ್ತಿ
ಹತ್ತಾವತಾರದ ಹಯವದನಗ
ಹತ್ತಾವತಾರದ ಹಯವದನ ದೇವಗ
ಹೊಸ ಮುತ್ತಿನಾರುತಿಯ ಬೆಳಗಿರೆ ॥ ಶೋಭಾನೆ ॥
---------------
ಶ್ರೀಶ್ರೀಪಾದರಾಜವಿರಚಿತ
ಶ್ರೀ ಮಧ್ವನಾಮ
ಜಯ ಜಯ ಜಗತ್ತ್ರಾಣ ಜಗದೊಳಗೆ ಸುತ್ರಾಣ
ಅಖಿಲಗುಣಸದ್ಧಾಮ ಮಧ್ವನಾಮ ॥ಪ॥
ಆವ ಕಚ್ಚಪರೂಪದಿಂದಲಂಡೋದಕವ
ಓವಿ ಧರಿಸಿದ ಶೇಷಮೂರುತಿಯನು
ಆವವನ ಬಲವಿಡಿದು ಹರಿಯ ಸುರರೈಯ್ದುವರು
ಆ ವಾಯು ನಮ್ಮ ಕುಲಗುರುರಾಯನು ॥1॥
ಆವವನು ದೇಹದೊಳಗಿರಲು ಹರಿ ನೆಲೆಸಿಹನು
ಆವವನು ತೊಲಗೆ ಹರಿ ತಾ ತೊಲಗುವ
ಆವವನು ದೇಹದೊಳಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲಗುರುರಾಯನು ॥2॥

ಕರಣಾಭಿಮಾನಿ ಸುರರುಗಳು ದೇಹವ ಬಿಡಲು
ಕುರುಡ ಕಿವುಡ ಮೂಕನೆಂದೆನಿಸುವ
ಪರಮಮುಖ್ಯಪ್ರಾಣ ತೊಲಗಲಾ ದೇಹವನು
ಅರಿತು ಪೆಣವೆಂದು ಪೇಳ್ವರು ಬುಧಜನರು ॥3॥

ಸುರರೊಳಗೆ ನರರೊಳಗೆ ಸರ್ವಭೂತಗಳೊಳಗೆ
ಪರತರನೆನಿಸಿ ನಿಯಾಮಿಸಿ ನೆಲೆಸಿಹನು
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು
ಗುರುಕುಲತಿಲಕ ಮುಖ್ಯ ಪವಮಾನನು ॥4॥

ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು
ವಾತಸುತ ಹನುಮಂತನೆಂದೆನಿಸಿದ
ಪೋತಭಾವದಿ ತರಣಿಬಿಂಬಕ್ಕೆ ಲಂಘಿಸಿದ
ಈತಗೆಣೆಗಾಣೆ ಮೂರ್ಲೋಕದೊಳಗೆ ॥5॥

ತರಣಿಗಭಿಮುಖನಾಗಿ ಶಬ್ದಶಾಸ್ತ್ರವ ಪಠಿಸಿ
ಉರವಣಿಸಿ ಹಿಂದು ಮುಂದಾಗಿ ನಡೆದ
ಪರಮ ಪವಮಾನಸುತ ಉದಯಾಸ್ತಶೈಲಗಳ
ಭರದಿ ಐದಿದ ಈತಗುಪಮೆಯುಂಟೇ ॥6॥

ಅಖಿಲವೇದಗಳ ಸಾರವ ಧರಿಸಿ ಮುನ್ನಿವನು
ನಿಖಿಲವ್ಯಾಕರಣಗಳ ಇವ ಪೇಳಿದ
ಮುಖದಲ್ಲಿ ಕಿಂಚಿದಪಶಬ್ದ ಇವಗಿಲ್ಲೆಂದು
ಮುಖ್ಯಪ್ರಾಣನನು ರಾಮನನುಕರಿಸಿದ ॥7॥

ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿ
ಧರಣಿಸುತೆಯಳ ಕಂಡು ದನುಜರೊಡನೆ
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ
ಉರುಹಿ ಲಂಕೆಯ ಬಂದ ಹನುಮಂತನು ॥8॥

ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಬಲು ರಕ್ಕಸರನು
ಒರೆಸಿ ರಣದಲ್ಲಿ ದಶಶಿರನ ಹುಡಿಗಟ್ಟಿ ತಾ
ಮೆರೆದ ಹನುಮಂತ ಬಲವಂತ ಧೀರ ॥9॥

ಉರಗಬಂಧಕೆ ಸಿಲುಕಿ ಕಪಿವರರು ಮೈ ಮರೆಯೆ
ತರಣಿಕುಲತಿಲಕನಾಜ್ಞೆಯ ತಾಳಿದ
ಗಿರಿಸಹಿತ ಸಂಜೀವನವ ಕಿತ್ತು ತಂದಿತ್ತ
ಧರೆಯೊಳಗೆ ಸರಿಯುಂಟೆ ಹನುಮಂತಗೆ ॥10॥

ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆ
ಭಜಿಸಿ ಮೌಕ್ತಿಕದ ಹಾರವನು ಪಡೆದ
ಅಜಪದವಿಯನು ರಾಮ ಕೊಡುವೆನೆನೆ ಹನುಮಂತ
ನಿಜಭಕುತಿಯನೆ ಬೇಡಿ ವರವ ಪಡೆದ ॥11॥

ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ
ಸೋಮಕುಲದಲಿ ಜನಿಸಿ ಪಾರ್ಥರೊಡನೆ
ಭೀಮ ವಿಕ್ರಮ ರಕ್ಕಸರನು ಮುರಿದಟ್ಟಿದ
ಆ ಮಹಿಮ ನಮ್ಮ ಕುಲಗುರುರಾಯನು ॥12॥

ಕರದಿಂದ ಶಿಶುಭಾವನಾದ ಭೀಮನ ಬಿಡಲು
ಗಿರಿಯೊಡೆದು ಶತಶೃಂಗವೆಂದೆನಿಸಿತು
ಹರಿಗಳಾ ಹರಿಗಳಿಂ ಕರಿಗಳಾ ಕರಿಗಳಿಂ
ಅರೆವ ವೀರನಿಗೆ ಸುರ-ನರರು ಸರಿಯೆ ॥13॥

ಕುರುಪ ಗರಳವನಿಕ್ಕೆ ನೆರೆಯುಂಡು ತೇಗಿದಾ
ಉರಗಗಳ ಮೇಲ್ಬಿಡಲು ಅದನೊರಸಿದ
ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ
ಧರಿಸಿ ಜಾಹ್ನವಿಗೊಯ್ದ ತನ್ನನುಜರ ॥14॥

ಅಲ್ಲಿರ್ದ ಬಕ-ಹಿಡಿಂಬಕರೆಂಬ ರಕ್ಕಸರ
ನಿಲ್ಲದೊರೆಸಿದ ಲೋಕಕಂಟಕರನು
ಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದು
ಎಲ್ಲ ಸುಜನರಿಗೆ ಹರುಷವ ತೋರಿದ ॥15॥

ರಾಜಕುಲವಜ್ರನೆನಿಸಿದ ಮಾಗಧನ ಸೀಳಿ
ರಾಜಸೂಯಯಾಗವನು ಮಾಡಿಸಿ
ಆಜಿಯೊಳು ಕೌರವರ ಬಲವ ಸವರುವೆನೆಂದು
ಮೂಜಗವರಿಯೆ ಕಂಕಣ ಕಟ್ಟಿದ ॥16॥

ಮಾನನಿಧಿ ದ್ರೌಪದಿಯ ಮನದಿಂಗಿತವನರಿತು
ದಾನವರ ಸವರಬೇಕೆಂದು ಬೇಗ
ಕಾನನವ ಪೊಕ್ಕು ಕಿರ್ಮೀರಾದಿಗಳ ತರಿದು
ಮಾನಿನಿಗೆ ಸೌಗಂಧಿಕವನೆ ತಂದ ॥17॥

ದುರುಳ ಕೀಚಕನು ತಾ ದ್ರೌಪದಿಯ ಚಲುವಿಕೆಗೆ
ಮರುಳಾಗಿ ಕರಕರೆಯ ಮಾಡಲವನಾ
ಗರಡಿಮನೆಯೊಳು ಬರಸಿ ಒರೆಸಿ ಅವನನ್ವಯದ
ಕುರುಪನಟ್ಟಿದ ಮಲ್ಲರನು ಸವರಿದ ॥18॥

ವೈರಿ ದುಶ್ಶಾಸನನ ರಣದಲ್ಲಿ ಎಡೆಗೆಡಹಿ
ವೀರ ನರಹರಿಯ ಲೀಲೆಯ ತೋರಿದ
ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ
ಓರಂತೆ ಕೌರವನ ಮುರಿದು ಮೆರೆದ ॥19॥

ಗುರುಸುತನು ಸಂಗರದಿ ನಾರಾಯಣಾಸ್ತ್ರವನು
ಉರವಣಿಸಿ ಬಿಡಲು ಶಸ್ತ್ರವ ಬಿಸುಟರು
ಹರಿಕೃಪೆಯ ಪಡೆದಿರ್ದ ಭೀಮ ಹುಂಕಾರದಲಿ
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ ॥20॥

ನೀರೊಳಗಿದ್ದ ದುರ್ಯೋಧನನ ಹೊರಗೆಡಹಿ
ಊರುದ್ವಯವ ತನ್ನ ಗದೆಯಿಂದ ಮುರಿದ
ನಾರಿರೋದನ ಕೇಳಿ ಮನಮರುಗಿ ಗುರುಸುತನ
ಹಾರಿಹಿಡಿದು ಶಿರೋರತ್ನ ಪಡೆದ ॥21॥

ಚಂಡವಿಕ್ರಮನು ಗದೆಗೊಂಡು ರಣದಿ ಭೂ-
ಮಂಡಲದೊಳಿದಿರಾಂತ ಖಳರನೆಲ್ಲಾ
ಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನು
ಕಂಡು ನಿಲ್ಲುವರಾರು ತ್ರಿಭುವನದೊಳು ॥22॥

ದಾನವರು ಕಲಿಯುಗದೊಳವತರಿಸಿ ವಿಬುಧರೊಳು
ವೇನನ ಮತವನರುಹಲದನರಿತು
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ
ಮಾನನಿಧಿ ಮಧ್ವಾಖ್ಯನೆಂದೆನಿಸಿದ ॥23॥

ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿ
ನಿರ್ಭಯದಿ ಸಕಲಶಾಸ್ತ್ರವ ಪಠಿಸಿದ
ಉರ್ವಿಯೊಳು ಮಾಯೆ ಬೀರಲು ತತ್ತ್ವಮಾರ್ಗವನು
ಸರ್ವ ಸುಜನರಿಗೆ ತಾ ತೋರಿ ಮೆರೆದಾ ॥24॥

ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ
ದುರ್ವಾದಿಗಳ ಮತವನೆ ಖಂಡಿಸಿ
ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿದಾ
ಶರ್ವಾದಿಗೀರ್ವಾಣಸಂತತಿಯಲಿ ॥25॥

ಏಕವಿಂಶತಿ ಕುಭಾಷ್ಯಗಳ ಬೇರನು ತರಿದು
ಶ್ರೀಕರಾರ್ಚಿತನೊಲುಮೆ ಶಾಸ್ತ್ರ ರಚಿಸಿ
ಲೋಕತ್ರಯದೊಳಿದ್ದ ಸುರರು ಆಲಿಸುವಂತೆ
ಆ ಕಮಲನಾಭಯತಿನಿಕರಕೊರೆದ ॥26॥

ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ
ಪದಕೆರಗಿ ಅಖಿಳವೇದಾರ್ಥಗಳನು
ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವ
ಐದಿದ ಮಧ್ವಮುನಿರಾಯಗಭಿವಂದಿಪೆ ॥27॥

ಜಯ ಜಯತು ದುರ್ವಾದಿಮತತಿಮಿರಮಾರ್ತಾಂಡ
ಜಯ ಜಯತು ವಾದಿಗಜಪಂಚಾನನ
ಜಯ ಜಯತು ಚಾರ್ವಾಕಗರ್ವಪರ್ವತಕುಲಿಶ
ಜಯ ಜಯ ಜಗನ್ನಾಥ ಮಧ್ವನಾಥ ॥28॥

ತುಂಗಕುಲ ಗುರುವರನ ಹೃತ್ಕಮಲದೊಳು ನೆಲೆಸಿ
ಭಂಗವಿಲ್ಲದ ಸುಖವ ಸುಜನಕೆಲ್ಲ
ಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕನು
ರಂಗವಿಠಲನೆಂದು ನೆರೆ ಸಾರಿರೈ ॥29॥
॥ ಶ್ರೀ ಮಧ್ವನಾಮ ಸಂಪೂರ್ಣ ॥
***
॥ ಶ್ರೀಜಗನ್ನಾಥದಾಸವಿರಚಿತ ಫಲಸ್ತುತಿ ॥
ಸೋಮಸೂರ್ಯೋಪರಾಗದಿ ಗೋಸಹಸ್ರಗಳ
ಭೂಮಿದೇವರಿಗೆ ಸುರನದಿಯ ತಟದಿ
ಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲವಕ್ಕು
ಈ ಮಧ್ವನಾಮ ಬರೆದೋದಿದವಗೆ ॥1॥

ಪುತ್ರರಿಲ್ಲದವ ಸತ್ಪುತ್ರರೈದುವರು
ಸರ್ವತ್ರದಲಿ ದಿಗ್ವಿಜಯವಹುದು ಅನುದಿನ
ಶತ್ರುಗಳು ಕೆಡುವರಪಮೃತ್ಯು ಬರಲಂಜುವುದು
ಸೂತ್ರನಾಮಕನ ಸಂಸ್ತುತಿ ಮಾತ್ರದಿ ॥2॥

ಶ್ರೀಪಾದರಾಯ ಪೇಳಿದ ಮಧ್ವನಾಮ ಸಂ-
ತಾಪಕಳೆದಖಿಳ ಸೌಖ್ಯವನೀವುದು
ಶ್ರೀಪತಿ ಜಗನ್ನಾಥವಿಠಲನ ತೋರಿ ಭವ-
ಕೂಪಾರದಿಂದ ಕಡೆ ಹಾಯಿಸುವುದು ॥3॥
***

ಶ್ರೀ ವಿಜಯದಾಸ ವಿರಚಿತ
ಶ್ರೀಧನ್ವಂತರಿ ಸುಳಾದಿ
ಧ್ರುವ ತಾಳ
ಆಯು ವೃದ್ಧಿಯಾಗುವುದು ಶ್ರೇಯಸ್ಸು ಬರುವುದು
ಕಾಯ ನಿರ್ಮಲಿನ ಕಾರಣವಾಹುದು.
ಮಾಯಾ ಹಿಂದಾಗುವುದು ನಾನಾರೋಗದ ಬೀಜ
ಬೇಯಿಸಿ ಕಳೆವುದು ವೇಗಾದಿಂದಾ
ನಾಯಿ ಮೊದಲಾದ ಕುತ್ಸಿತ ದೇಹನಿ-
ಕಾಯವ ತೆತ್ತು ದುಷ್ಕರ್ಮದಿಂದ
ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ
ಹೇಯಸಾಗರದೊಳು ಬಿದ್ದು ಬಳಲಿ,
ನೋಯಿಸಿಕೊಂಡು, ನೆಲೆಗಾಣದೆ ಒಮ್ಮೆ ತನ್ನ
ಬಾಯಲ್ಲಿ ವೈದ್ಯಮೂರ್ತಿ ಧನ್ವಂತರಿ
ರಾಯಾ ರಾಜೌಷಧಿ ನಿಯಾಮಕ ಕರ್ತಾ
ಶ್ರೀಯರಸನೆಂದು ತುತಿಸಲಾಗಿ
ತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆ
ನೋಯಗೊಡದೆ ನಮ್ಮನ್ನು ಪಾಲಿಪಾ
ಧ್ಯೇಯಾ ದೇವಾದಿಗಳಿಗೆ ಧರ್ಮಜ್ಞಗುಣಸಾಂದ್ರ
ಶ್ರೇಯಸ್ಸು ಕೊಡುವನು ಭಜಕರಿಗೆ
ಮಾಯಾಮಾತ್ರದಿಂದ ಜಗವೆಲ್ಲ ವ್ಯಾಪಿಸಿ ಸ-
ನ್ನ್ಯಾಯವಂತನಾಗಿ ಚೇಷ್ಟೆ ಮಾಳ್ಪ
ವಾಯುವಂದಿತ ನಿತ್ಯ ವಿಜಯವಿಠಲರೇಯಾ
ಪ್ರೀಯನು ಕಾಣೋ ನಮಗೆ ಅನಾದಿರೋಗ ಕಳೆವ ॥1॥
ಮಟ್ಟ ತಾಳ
ಧನ್ವಂತರಿ ಶ್ರೀ ಧನ್ವಂತರಿ ಎಂದು
ಸನ್ನುತಿಸಿ ಸತತಾವಿಚ್ಛಿನ್ನ ಜ್ಞಾನದಿಂದ
ನಿನ್ನವ ನಿನ್ನವನೆಂದು ಘನ್ನತಿಯಲಿ ನೆನೆವ
ಮನ್ನುಜ ಭುವನ್ನದೊಳು ಧನ್ಯನು ಧನ್ಯನೆನ್ನಿ
ಘನ್ನಮೂರುತಿ ಒಲಿವ ವಿಜಯವಿಠಲ ಸುಪ್ರ-
ಸನ್ನ ಸತ್ಯನೆಂದು ಬಣ್ಣಿಸು ಬಹುವಿಧದಿ ॥2॥
ತ್ರಿಪುಟ ತಾಳ
ಶಶಿಕುಲೋದ್ಭವ ದೀರ್ಘತಮನಂದನ ದೇವ,
ಶಶಿವರ್ಣಪ್ರಕಾಶ ಪ್ರಭುವೆ ವಿಭುವೆ
ಶಶಿಮಂಡಲಸಂಸ್ಥಿತ ಕಲಶ ಕಲಶಪಾಣಿ
ಬಿಸಜಲೋಚನ ಆಶ್ವಿನೇಯವಂದ್ಯ !
ಶಶಿಗರ್ಭಭೂರುಹ ಲತೆ ತಾಪ ಓಡಿಸುವ
ಔಷಧಿತುಳಸಿಜನಕ ವಾಸುದೇವ!
ಅಸುರನಿರ್ಜರತತಿ ನೆರೆದು ಗಿರಿಯ ತಂದು
ಮಿಸುಕದೆ ಮಹೋದಧಿ ಮಥಿಸಲಾಗಿ
ನಸುನಗುತ ಪುಟ್ಟಿದೆ ಪೀಯೂಷಘಟ ಧರಿಸಿ
ಅಸಮದೈವವೆ ! ನಿನ್ನ ಮಹಿಮೆಗೆ ನಮೋ ನಮೋ
ಬಿಸಜಸಂಭವ ರುದ್ರ ಮೊದಲಾದ ದೇವತಾ-
ಋಷಿನಿಕರ ನಿನ್ನ ಕೊಂಡಾಡುವುದು !
ದಶದಿಶದಲಿ ಮೆರೆವ ವಿಜಯವಿಠಲ
ಭಿಷಕು ಅಸು ಇಂದ್ರಿಯಂಗಳ ರೋಗನಿವಾರಣ ॥3॥
ಅಟ್ಟ ತಾಳ
ಶರಣು ಶರಣು ಧನ್ವಂತರಿ ತಮೋಗುಣನಾಶಾ
ಶರಣು ಆರ್ತಜನಪರಿಪಾಲಕ, ದೇವ-
ತರುವೇ, ಭವತಾಪಹರಣ ದಿತಿಸುತ-
ಹರಣ ಮೋಹಕಲೀಲಾ ಪರಮಪೂರಣ ಬ್ರಹ್ಮ, ಬ್ರಹ್ಮ ಉದ್ಧಾರಕ,
ಉರುಪರಾಕ್ರಮ ಉರುಪರಾಕ್ರಮ ಉರಗಶಾಯಿ
ವರಕಿರೀಟ, ಮಹಾಮಣಿಕುಂಡಲಕರ್ಣ,
ಮಿರುಗುವ ಹಸ್ತಕಂಕಣ, ಹಾರಪದಕ,
ವರಕಾಂಚೀಪೀತಾಂಬರ, ಚರಣಭೂಷಾ,
ಸಿರಿವತ್ಸಲಾಂಛನ ವಿಜಯವಿಠಲರೇಯ
ತರಣಿಗಾತರ ಜ್ಞಾನಮುದ್ರಾಂಕಿತ ಹಸ್ತ ॥4॥
ಏಳುವಾಗಲಿ, ಮತ್ತೆ ತಿರುಗುವಾಗಲಿ,
ಬೀಳುವಾಗಲಿ, ನಿಂದು ಕುಳ್ಳಿರುವಾಗಲಿ,
ಹೇಳುವಾಗಲಿ ವಾರ್ತೆ ಕೇಳುವಾಗಲಿ, ಕರೆದು
ಪೇಳುವಾಗಲಿ, ಪೋಗಿ ಸತ್ಕರ್ಮ ಮಾಡುವಾಗ
ಬಾಳುವಾಗಲಿ, ಭೋಜನ ನಾನಾ ಷಡ್ರಸ ಸ-
ಮ್ಮೇಳವಾಗಲಿ, ಮತ್ತೆ ಪುತ್ರಾದಿಗಳೊಡನೆ
ಖೇಳವಾಗಲಿ ಮನುಜ ಮರೆಯದೆ ಒಮ್ಮೆ ತನ್ನ
ನಾಲಗೆ ಕೊನೆಯಲ್ಲಿ ಧನ್ವಂತರಿ ಎಂದು
ಕಾಲ ಅಕಾಲದಲ್ಲಿ ಸ್ಮರಿಸಿದ ಮಾನವಗೆ
ವ್ಯಾಳೆವ್ಯಾಳೆಗೆ ಬಾಹೋ ಭವಬೀಜಪರಿಹಾರ
ನೀಲಮೇಘಶ್ಯಾಮ ವಿಜಯವಿಠಲರೇಯ
ವಾಲಗಕೊಡುವನು ಮುಕ್ತರ ಸಂಗದಲ್ಲಿ ॥5॥
ಜತೆ
ಧಂ ಧನ್ವಂತರಿ ಎಂದು ಪ್ರಣವಪೂರ್ವಕದಿಂದ
ವಂದಿಸಿ ನೆನೆಯಲು ವಿಜಯವಿಠಲ ಒಲಿವಾ ॥
***
ಶ್ರೀವಿಜಯದಾಸವಿರಚಿತ
ಶ್ರೀನರಸಿಂಹಸುಳಾದಿ
ಧ್ರುವತಾಳ
ವೀರಸಿಂಹನೆ ನಾರಸಿಂಹನೆ ದಯಪಾರಾ-
ವಾರನೆ ಭಯ ನಿವಾರಣ ನಿರ್ಗುಣ
ಸಾರಿದವರ ಸಂಸಾರ ವೃಕ್ಷದ ಮೂಲ
ಬೇರರಸಿ ಕೀಳುವ ಬಿರಿದು ಭಯಂಕರ
ಘೋರಾವತಾರ ಕರಾಳವದನ ಅ-
ಘೋರ ದುರಿತ ಸಂಹಾರ ಮಾಯಾಕಾರ
ಕ್ರೂರ ದೈತ್ಯರ ಶೋಕಕಾರಣ ಉದುಭವ
ಈರೇಳು ಭುವನ ಸಾಗರದೊಡಿಯಾ
ಆ ರೌದ್ರನಾಮಾ ವಿಜಯವಿಠ್ಠಲ ನರಸಿಂಗ
ವೀರರಸಾತುಂಗ ಕಾರುಣ್ಯಪಾಂಗ ॥1॥
ಮಟ್ಟತಾಳ
ಮಗುವಿನ ರಕ್ಕಸನು ಹಗಲಿರುಳು ಬಿಡದೆ
ಹಗೆಯಿಂದಲಿ ಹೊಯ್ದು ನಗಪನ್ನಗ ವನಧಿ
ಗಗನ ಮಿಗಿಲಾದ ಅಗಣಿತ ಬಾಧೆಯಲಿ
ನೆಗೆದು ಒಗದು ಸಾವು ಬಗೆದು ಕೊಲ್ಲುತಿರಲು
ಜಗದವಲ್ಲಭನೆ ಸಗುಣಾನಾದಿಗನೆ
ನಿಗಮಾವಂದಿತನೆ ಪೊಗಳಿದ ಭಕುತರ
ತಗಲಿ ತೊಲಗನೆಂದೂ ಮಿಗೆ ಕೂಗುತಲಿರಲು
ಯುಗ ಯುಗದೊಳು ದಯಾಳುಗಳ ದೇವರ ದೇವ
ಯುಗಾದಿಕೃತೆ ನಾಮಾ ವಿಜಯ ವಿಠ್ಠಲ ಹೋ, ಹೋ
ಯುಗಳ ಕರವ ಮುಗಿದು ಮಗುವು ಮೊರೆಯಿಡಲು ॥2॥
ರೂಪಕ ತಾಳ
ಕೇಳಿದಾಕ್ಷಣದಲ್ಲಿ ಲಾಲಿಸಿ ಭಕ್ತನ್ನ
ಮೌಳಿವೇಗದಲಿ ಪಾಲಿಸುವೆನೆಂದು
ತಾಳಿ ಸಂತೋಷವ ತೂಳಿ ತುಂಬಿದಂತೆ
ಮೂಲೋಕದ ಪತಿಯಾಲಯದಿಂದ ಸು
ಶೀಲ ದುರ್ಲಭನಾಮ ವಿಜಯವಿಠ್ಠಲ ಪಂಚ-
ಮೌಳಿ ಮಾನವ ಕಂಭ ಸೀಳಿ ಮೂಡಿದ ದೇವ ॥3॥
ಝಂಪಿತಾಳ
ಲಟ ಲಟಾ ಲಟಲಟಾ ಲಟಕಿಸಿ ವನಜಾಂಡ
ಕಟಹ ಪಟ ಪಟ ಪಟುತ್ಕಟದಿ ಬಿಚ್ಚುತಿರಲು
ಪುಟ ಪುಟಾ ಪುಟನೆಗೆದು ಚೀರಿ ಹಾರುತ್ತ ಪ-
ಲ್ಕಟ ಕಟಾ ಕಟ ಕಡಿದು ರೋಷದಿಂದ
ಮಿಟಿ ಮಿಟಿ ಮಿಟನೆ ರಕ್ತಾಕ್ಷಿಯಲ್ಲಿ ನೋಡಿ
ತಟಿತ್ಕೋಟಿ ಉರ್ಭಟಗೆ ಆರ್ಭಟವಾಗಿರಲು
ಕುಟಿಲರಹಿತ ವ್ಯಕ್ತ ವಿಜಯವಿಠ್ಠಲ ಶಕ್ತ
ಧಿಟ ನಿಟಿಲನೇತ್ರ ಸುರಕಟಕಪರಿಪಾಲಾ ॥4॥
ತ್ರಿವಿಡಿತಾಳ
ಬೊಬ್ಬಿರಿಯೇ ವೀರಧ್ವನಿಯಿಂದ ತನಿಗಿಡಿ
ಹಬ್ಬಿ ಮುಂಜೋಣಿ ಉರಿ ಹೋರೆದ್ದು ಸುತ್ತೆ
ಉಬ್ಬಸ ರವಿಗಾಗೆ, ಅಬ್ಜಾಂಡ ನಡುಗುತಿರೆ
ಅಬ್ದಿಸಪುತ ಉಕ್ಕಿ ಹೊರಚಲ್ಲಿ ಬರುತಿರೆ
ಅಬ್ಜಭವಾದಿಗಳು ತಬ್ಬಿಬ್ಬುಗೊಂಡರು
ಅಬ್ಬರವೇನೆನುತ ನಭದ ಗೂಳೆಯು ತಗಿಯೆ
ಶಬ್ದ ತುಂಬಿತು ಅವ್ಯಾಕೃತಾಕಾಶ ಪರಿಯಂತ
ನಿಬ್ಬರ ತರುಗಿರಿ ಜರರಿಸಲು
ಒಬ್ಬರಿಗೊಶವಲ್ಲದ ನಮ್ಮಾ ವಿಜಯವಿಠ್ಠಲ
ಇಬ್ಬಗೆಯಾಗಿ ಕಂಭದಿಂದ ಪೊರಮಟ್ಟ ॥5॥
ಅಟ್ಟತಾಳ
ಘುಡಿ ಘುಡಿಸುತ ಕೋಟಿ ಸಿಡಿಲು ಗಿರಿಗೆ ಬಂದು
ಹೊಡೆದಂತೆ ಚೀರಿ ಬೊಬ್ಬಿಡುತಲಿ ಲಂಘಿಸಿ
ಹಿಡಿದು ರಕ್ಕಸನ್ನ ಕೆಡಹಿ ಮಂಡಿಯ ತುಡುಕಿ
ತೊಡಿಯ ಮೇಲೇರಿಸಿ ಹೇರೊಡಲ ಕೂರುಗುರಿಂದ
ಪಡುವಲಗಡಲ ತಡಿಯ ತರಣಿಯ ನೋಡಿ
ಕಡುಕೋಪದಲಿ ಸದೆಬಡಿದು ರಕ್ಕಸನ ಕೆಡಹಿ
ನಿಡಿಗರುಳನು ಕೊರಳಡಿಯಲ್ಲಿ ಧರಿಸಿದ
ಸಡಗರದ ದೈವ ಕಡುಗಲಿ ಭೂರ್ಭೂವ
ವಿಜಯವಿಠ್ಠಲ ಪಾ-
ಲ್ಗಡಲೊಡಿಯಾ ಶರಣರೊಡೆಯ ಒಡನೊಡನೆ ॥6॥
ಏಕತಾಳ
ಉರಿ ಮಸಗೆ ಚತುರ್ದಶ ಧರಣಿ ತಲ್ಲಣಿಸಲು
ಪರಮೇಷ್ಠಿ ಹರಸುರರು ಸಿರಿದೇವಿಗೆ ಮೊರೆ ಇಡಲು
ಕರುಣದಿಂದಲಿ ತನ್ನ ಶರಣನ್ನ ಸಹಿತ ನಿನ್ನ
ಚರಣಕ್ಕೆ ಎರಗಲು ಪರಮಶಾಂತನಾಗಿ
ಹರಹಿದೆ ದಯವನ್ನು ಸುರರು ಕುಸುಮವರುಷ
ಕರೆಯಲು ಭೇರಿ ವಾದ್ಯ ಮೆರೆವುತ್ತರರೆ ಎನುತ
ಪರಿಪರಿವಾಲಗ ವಿಸ್ತಾರದಿಂದ ಕೈಕೊಳ್ಳುತ್ತ
ಮೆರೆದು ಸುರರುಪದ್ರ ಹರಿಸಿ ಬಾಲಕನ
ಕಾಯ್ದ ಪರದೈವ ಗಭೀರಾತ್ಮ ವಿಜಯವಿಠ್ಠಲ ನಿಮ್ಮ
ಚರಿತೆ ದುಷ್ಟರಿಗೆ ಭೀಕರವೋ ಸಜ್ಜನ ಪಾಲಾ ॥7॥
ಜತೆ
ಪ್ರಹ್ಲಾದವರದ ಪ್ರಪನ್ನ ಕ್ಲೇಶಭಂಜನ್ನ
ಮಹಹವಿಷೆ ವಿಜಯವಿಠ್ಠಲ ನರಮೃಗವೇಷಾ ॥8॥
***
ಶ್ರೀ ವಿಜಯದಾಸ ವಿರಚಿತ
ಶ್ರೀ ದುರ್ಗಾ ಸುಳಾದಿ
ದುರ್ಗಾ ದುರ್ಗಿಯೆ, ಮಹಾದುಷ್ಟಜನಸಂಹಾರಿ
ದುರ್ಗಾಂತರ್ಗತಾ ದುರ್ಗೆ, ದುರ್ಲಭೆ, ಸುಲಭೆ,
ದುರ್ಗಮವಾಗಿದೆ ನಿನ್ನ ಮಹಿಮೆ, ಬೊಮ್ಮ-
ಭರ್ಗಾದಿಗಳಿಗೆಲ್ಲ ಗುಣಿಸಿದರೂ
ಸ್ವರ್ಗಭೂಮಿಪಾತಾಳ ಸಮಸ್ತವ್ಯಾಪುತೆ ದೇವಿ-
ವರ್ಗಕ್ಕೆ ಮೀರಿದ ಬಲು ಸುಂದರಿ.
ದುರ್ಗಣಾದವರ ಬಾಧೆ ಬಹಳವಾಗಿದೆ ತಾಯೆ !
ದುರ್ಗತಿಹಾರಿ, ನಾನು ಪೇಳುವುದೇನು ?
ದುರ್ಗಂಧವಾಗಿದೆ ಸಂಸೃತಿ ನೋಡಿದರೆ
ನಿರ್ಗಮನ ಕಾಣೆನಮ್ಮ, ಮಂಗಳಾಂಗಿ !
ದುರ್ಗೆ, ಹೇ ದುರ್ಗೆ, ಮಹಾದುರ್ಗೆ,
ಭೂದುರ್ಗೆ, ವಿಷ್ಣುದುರ್ಗೆ, ದುರ್ಜಯೆ, ದುರ್ಧರ್ಷೆ, ಶಕ್ತೆ
ದುರ್ಗ ಕಾನನ ಗಹನ ಪರ್ವತ ಘೋರಸರ್ಪ
ಗರ್ಗರಶಬ್ದ ವ್ಯಾಘ್ರ ಕರಡಿ ಮೃತ್ಯು-
ವರ್ಗ ಭೂತಪ್ರೇತಪಿಶಾಚ ಮೊದಲಾದ
ದುರ್ಗಣ ಸಂಕಟ ಪ್ರಾಪ್ತವಾಗೆ ದುರ್ಗಾ
ದುರ್ಗೆ ಎಂದು ಉಚ್ಚಸ್ವರದಿಂದ
ನಿರ್ಗಳಿತವಾಗಿ ಒಮ್ಮೆ ಕೂಗಿದರೂ,
ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರು,
ಸುರ್ಗಣ ಜಯ ಜಯವೆಂದು ಪೊಗಳುತಿರೆ
ಕರ್ಗಳಿಂದಲಿ ಎತ್ತಿ ಸಾಕುವ ಸಾಕ್ಷಿಭೂತೆ !
ನೀರ್ಗುಡಿದಂತೆ ಲೋಕಲೀಲೆ ನಿನಗೆ
ಸ್ವರ್ಗಂಗಾಜನಕ ನಮ್ಮ ವಿಜಯವಿಠಲನಂಘ್ರಿ
ದುರ್ಗಾಶ್ರಯ ಮಾಡಿ ಬದುಕುವಂತೆ ಮಾಡು ॥1॥
ಮಟ್ಟ ತಾಳ
ಅರಿದರಾಂಕುಶಶಕ್ತಿ ಪರಶು ನೇಗಿಲು ಖಡ್ಗ
ಸರಸಿಜ ಗದಾ ಮುದ್ಗರ ಚಾಪ ಮಾರ್ಗಣ
ವರ ಅಭಯ ಮುಸಲ ಪರಿಪರಿ ಆಯುಧವ
ಧರಿಸಿ ಮೆರೆವ ಲಕುಮಿ ! ಸರಸಿಜಭವ ರುದ್ರ
ಸರುವ ದೇವತೆಗಳ ಕರುಣಾಪಾಂಗದಲಿ
ನಿರೀಕ್ಷಿಸಿ ಅವರವರ ಸ್ವರೂಪಸುಖ ಕೊಡುವ
ಸಿರಿಭೂಮಿದುರ್ಗೆ !
ಸರುವೋತ್ತಮ ನಮ್ಮ ವಿಜಯವಿಠಲನಂಘ್ರಿ
ಪರಮಭಕುತಿಯಿಂದ ಸ್ಮರಿಸುವ ಜಗಜ್ಜನನಿ ॥2॥
ತ್ರಿವಿಡಿ ತಾಳ
ಸ್ತುತಿ ಮಾಡುವೆ ನಿನ್ನ ಕಾಳಿ ಮಹಾಕಾಳಿ ಉ-
ನ್ನತಬಾಹು ಕರಾಳವದನೆ ಚಂದಿರಮುಖಿ
ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿಂಚರಣೆ
ಸ್ಥಿತಿಯೆ ನಿದ್ರಾ ಭದ್ರೆ ಭಕ್ತವತ್ಸಲೆ ಭವ್ಯೆ
ಚತುರಷ್ಟದ್ವಿಹಸ್ತೆ, ಹಸ್ತಿಗಮನೆ, ಅ-
ದ್ಬುತಪ್ರಭಾವೆ, ಪ್ರವಾಸೆ ದುರ್ಗಾರಣ್ಯವಾಸೆ
ಕ್ಷಿತಿಭಾರಹರಣೆ ಕ್ಷೀರಾಬ್ದಿತನಯೆ ಸದ್-
ಗತಿಪ್ರದಾತೆ ಮಾಯೆ ಶ್ರೀಯೆ ಇಂದಿರೆ ರಮೆ
ದಿತಿಜಾತನಿಗ್ರಹೆ ನಿರ್ಧೂತಕಲ್ಮಶೆ
ಪ್ರತಿಕೂಲಭೇದೆ ಪೂರ್ಣಬೋಧೆ ರೌದ್ರೆ
ಅತಿಶಯರಕ್ತ ಜಿಹ್ವಾಲೋಲೆ ಮಾಣಿಕ್ಯಮಾಲೆ
ಜಿತಕಾಮೆ ಜನನಮರಣರಹಿತೆ ಖ್ಯಾತೆ
ಘೃತಪಾತ್ರ ಪರಮಾನ್ನ ತಾಂಬೂಲಹಸ್ತೆ ಸು-
ವ್ರತೆ ಪತಿವ್ರತೆ ತ್ರಿನೇತ್ರೆ ರಕ್ತಾಂಬರೆ
ಶತಪತ್ರನಯನೇ ನಿರುತಕನ್ಯೆ ಉದಯಾರ್ಕ-
ಶತಕೋಟಿಸನ್ನಿಭೆ ಹರಿ ಅಂಕಸಂಸ್ಥೆ
ಶ್ರುತಿತತಿನುತೆ ಶುಕ್ಲಶೋಣಿತರಹಿತೇ ಅ-
ಪ್ರತಿಹತೆ ಸರ್ವದಾ ಸಂಚಾರಿಣಿ ಚತುರೆ
ಚತುರ ಕಪರ್ದಿಯೆ ಅಂಭೃಣಿ ಹ್ರೀ
ಉತ್ಪತ್ತಿಸ್ಥಿತಿಲಯಕರ್ತೆ ಶುಭ್ರೆ ಶೋಭನಗಾತ್ರೆ
ಪತಿತಪಾವನೆ ಧನ್ಯೆ ಸರ್ವೌಷಧಿಯಲಿದ್ದು
ಹತಮಾಡು ಕಾಡುವ ರೋಗಂಗಳಿಂದ
ಕ್ಷಿತಿಯೊಳು ಸುಖದಿಂದ ಬಾಳುವ ಮತಿಯಿತ್ತು
ಸತತ ಕಾಯಲಿಬೇಕು ದುರ್ಗಾ ದುರ್ಗೆ,
ಚ್ಯುತಿದೂರ ವಿಜಯವಿಠಲರೇಯ ಪ್ರೀಯೆ
ಕೃತಾಂಜಲಿಯಿಂದ ತಲೆಬಾಗಿ ನಮಿಸುವೆ ॥3॥
ಅಟ್ಟತಾಳ
ಶ್ರೀಲಕ್ಷ್ಮೀ ಕಮಲಾ ಪದ್ಮಾ ಪದ್ಮಿನಿ ಕಮ-
ಲಾಲಯೆ ರಮಾ ವೃಷಾಕಪಿ ಧನ್ಯೆ ವೃದ್ಧಿ ವಿ-
ಶಾಲೆ ಯಜ್ಞ ಇಂದಿರೆ ಹಿರಣ್ಯಾ ಹರಿಣಿ
ವಾಲಯ ಸತ್ಯಾ ನಿತ್ಯಾನಂದೆ ತ್ರಾಹಿ ಸು-
ಶೀಲೆ, ಸುಗಂಧಸುಂದರಿ, ವಿದ್ಯಾಶೀಲ
ಸುಲಕ್ಷಣಾ ದೇವಿ, ನಾನಾರೂಪ
ಗಳಿಂದ ಮೆರೆವ ಮೃತ್ಯುನಾಶೆ
ವಾಲಗ ಕೊಡು ಸಂತರ ಸನ್ನಿಧಿಯಲ್ಲಿ
ಕಾಲಕಾಲಕೆ ಎನ್ನ ಭಾರ ವಹಿಸುವ ತಾಯಿ !
ಮೇಲುಮೇಲು ನಿನ್ನ ಶಕ್ತಿ ಕೀರ್ತಿ
ಬಲು ಕೇಳಿ ಕೇಳಿ ಬಂದೆ ಕೇವಲ ಈ ಮನ
ಗಾಳಿಯಂತೆ ಪರದ್ರವ್ಯಕೆ ಪೋಪದು
ಏಳಾಲ ಮಾಡದೆ ಉದ್ಧಾರವ ಮಾಡು.
ಕೈಲಾಸಪುರದಲ್ಲಿ ಪೂಜೆಗೊಂಬ ದೇವಿ,
ಮೂಲಪ್ರಕೃತಿ ಸರ್ವವರ್ಣಾಭಿಮಾನಿನಿ,
ಪಾಲಸಾಗರಶಾಯಿ ವಿಜಯವಿಠಲನೊಳು
ಲೀಲೆಯಾಡುವ ನಾನಾಭರಣಭೂಷಣೆ ಪೂರ್ಣೇ ॥4॥
ಆದಿತಾಳ
ಗೋಪಿನಂದನೆ ಮುಕ್ತೆ ದೈತ್ಯಸಂತತಿಗೆ ಸಂ
ತಾಪಕೊಡುತಿಪ್ಪ ಮಹಾಕಠೋರೆ ಉಗ್ರ-
ರೂಪವೈಲಕ್ಷಣೆ ಅಜ್ಞಾನಕಭಿಮಾನಿ
ತಾಪತ್ರಯವಿನಾಶೆ ಓಂಕಾರೆ ಹೂಂಕಾರೆ
ಪಾಪಿ ಕಂಸಗೆ ಭಯ ತೋರಿದ ಬಾಲಲೀಲೆ
ವ್ಯಾಪುತೆ ಧರ್ಮಮಾರ್ಗಪ್ರೇರಕೆ ಅಪ್ರಾಕೃತೆ !
ಸ್ವಾಪದಲ್ಲಿ ನಿನ್ನ ನೆನಸಿದ ಶರಣರ್ಗೆ
ಅಪಾರವಾಗಿದ್ದ ವಾರಿಧಿಯಂತೆ ಮಹಾ
ಆಪತ್ತು ಬಂದಿರಲು, ಹಾರಿ ಪೋಗೋದು ಸಪ್ತ-
ದ್ವೀಪನಾಯಕೆ ನರಕನಿರ್ಲೇಪಿ ತಮೋಗುಣದ
ವ್ಯಾಪಾರ ಮಾಡಿಸಿ ಭಕ್ತಜನರ್ಗೆ ಪುಣ್ಯ-
ಸೋಪಾನ ಮಾಡಿಕೊಡುವ ಸೌಭಾಗ್ಯವಂತೆ ದುರ್ಗೆ
ಪ್ರಾಪುತವಾಗಿ ಎನ್ನ ಮನದಲಿ ನಿಂದು ದುಃಖ-
ಕೂಪಾರದಿಂದಲಿ ಎತ್ತಿ ಕಡೆಮಾಡು ಜನ್ಮಂಗಳ ವಾಣಿ-
ಸೌಪರ್ಣಿ ಮೊದಲಾದ ಸತಿಯರು ನಿತ್ಯ ನಿನ್ನ
ಆಪಾದಮೌಳಿತನಕ ಭಜಿಸಿ ಭವ್ಯರಾದರು
ನಾ ಪೇಳುವದೇನು ? ಪಾಂಡವರ ಮನೋಭೀಷ್ಟೆ !
ಈ ಪಂಚಭೌತಿಕದಲ್ಲಿ ಆವ ಸಾಧನ ಕಾಣೆ.
ಶ್ರೀಪತಿನಾಮ ಒಂದೇ ಜಿಹ್ವಾಗ್ರದಲ್ಲಿ ನೆನೆವ
ಔಪಾಸನ ಕೊಡು, ರುದ್ರಾದಿಗಳ ವರದೆ.
ತಾಪಸಜನಪ್ರಿಯ ವಿಜಯವಿಠಲರೇಯನ
ಶ್ರೀಪಾದಾರ್ಚನೆ ಮಾಳ್ಪ ಶ್ರೀಭೂದುರ್ಗೆ ವರ್ಣತ್ರಯೆ ॥5॥
ಜೊತೆ
ದುರ್ಗೆ ಹಾ ಹೇ ಹಾ ಹಾ ದುರ್ಗೆ ಮಂಗಳದುರ್ಗೆ
ದುರ್ಗತಿ ಕೊಡದಿರು ನಮ್ಮ ವಿಜಯವಿಠಲಪ್ರಿಯೆ ॥
***
ಶ್ರೀಜಗನ್ನಾಥದಾಸ ವಿರಚಿತ
ಶ್ರೀವಿಘ್ನೇಶ್ವರಸಂಧಿ
ಹರಿಕಥಾಮೃತಸಾರ ಗುರುಗಳ
ಕರುಣದಿಂದಾಪನಿತು ಪೇಳುವೆ
ಪರಮಭಗವದ್ಭಕ್ತರಿದನಾದರದಿ ಕೇಳುವುದು ॥
ಶ್ರೀಶನಂಘ್ರಿಸರೋಜಭೃಂಗ ಮ-
ಹೇಶಸಂಭವ ಮನ್ಮನದೊಳು ಪ್ರ-
ಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯದಿಂದ
ನೀ ಸಲಹು ಸಜ್ಜನರ ವೇದ-
ವ್ಯಾಸಕರುಣಾಪಾತ್ರ ಮಹದಾ-
ಕಾಶಪತಿ ಕರುಣಾಳು ಕೈಪಿಡಿದೆಮ್ಮನುದ್ಧರಿಸು ॥1॥
ಏಕದಂತ ಇಭೇಂದ್ರಮುಖ ಚಾ-
ಮೀಕರಕೃತಭೂಷಣಾಂಗ ಕೃ-
ಪಾಕಟಾಕ್ಷದಿ ನೋಡು ವಿಜ್ಞಾಪಿಸುವೆ ಇನಿತೆಂದು
ನೋಕನೀಯನ ತುತಿಸುತಿಪ್ಪ ವಿ-
ವೇಕಿಗಳ ಸಹವಾಸಸುಖಗಳ
ನೀ ಕರುಣಿಸುವದೆಮಗೆ ಸಂತತ ಪರಮಕರುಣದಲಿ ॥2॥
ವಿಘ್ನರಾಜನೆ ದುರ್ವಿಷಯದೊಳು
ಮಗ್ನವಾಗಿಹ ಮನವ ಮಹದೋ-
ಷಘ್ನನಂಘ್ರಿಸರೋಜಯುಗಳದಿ ಭಕ್ತ್ತಿಪೂರ್ವಕದಿ
ಲಗ್ನವಾಗಲಿ ನಿತ್ಯ ನರಕಭ-
ಯಾಗ್ನಿಗಳಿಗಾನಂಜೆ ಗುರುವರ
ಭಗ್ನಗೈಸೆನ್ನವಗುಣಗಳನು ಪ್ರತಿದಿವಸದಲ್ಲಿ ॥3॥
ಧನಪ ವಿಷ್ವಕ್ಸೇನ ವೈದ್ಯಾ-
ಶ್ವಿನಿಗಳಿಗೆ ಸರಿಯೆನಿಪ ಷಣ್ಮುಖ-
ನನುಜ ಶೇಷಶತಸ್ಥದೇವೋತ್ತಮ ವಿಯದ್ಗಂಗಾ-
ವಿನುತ ವಿಶ್ವೋಪಾಸಕನೆ ಸ-
ನ್ಮನದಿ ವಿಜ್ಞಾಪಿಸುವೆ ಲಕ್ಷ್ಮೀ
ವನಿತೆಯರಸನ ಭಕ್ತ್ತಿಜ್ಞಾನವ ಕೊಟ್ಟು ಸಲಹುವದು ॥4॥
ಚಾರುದೇಷ್ಣಾಹ್ವಯನೆನಿಸಿ ಅವ-
ತಾರ ಮಾಡಿದೆ ರುಗ್ಮಿಣೀಯಲಿ
ಗೌರಿಯರಸನ ವರದಿ ಉದ್ಧಟರಾದ ರಾಕ್ಷಸರ
ಶೌರಿಯಾಜ್ಞದಿ ಸಂಹರಿಸಿ ಭೂ-
ಭಾರವಿಳುಹಿದ ಕರುಣಿ ತ್ವತ್ಪಾ-
ದಾರವಿಂದಕೆ ನಮಿಪೆ ಕರುಣಿಪುದೆಮಗೆ ಸನ್ಮತಿಯ ॥5॥
ಶೂರ್ಪಕರ್ಣದ್ವಯ ವಿಜಿತಕಂ-
ದರ್ಪಶರ ಉದಿತಾರ್ಕಸನ್ನಿಭ
ಸರ್ಪವರಕಟಿಸೂತ್ರ ವೈಕೃತಗಾತ್ರ ಸುಚರಿತ್ರ
ಸ್ವರ್ಪಿತಾಂಕುಶಪಾಶಕರ ಖಳ-
ದರ್ಪಭಂಜನ ಕರ್ಮಸಾಕ್ಷಿಗ
ತರ್ಪಕನು ನೀನಾಗಿ ತೃಪ್ತಿಯ ಬಡಿಸು ಸಜ್ಜನರ ॥6॥
ಖೇಶ ಪರಮಸುಭಕ್ತ್ತಿಪೂರ್ವಕ
ವ್ಯಾಸಕೃತಗ್ರಂಥಗಳನರಿತು ಪ್ರ-
ಯಾಸವಿಲ್ಲದೆ ಬರೆದು ವಿಸ್ತರಿಸಿದೆಯೊ ಲೋಕದೊಳು
ಪಾಶಪಾಣಿಯೇ ಪ್ರಾರ್ಥಿಸುವೆ ಉಪ-
ದೇಶಿಸೆನಗದರರ್ಥಗಳ ಕರು-
ಣಾಸಮುದ್ರ ಕೃಪಾಕಟಾಕ್ಷದಿ ನೋಡು ಪ್ರತಿದಿನದಿ ॥7॥
ಶ್ರೀಶನತಿನಿರ್ಮಲಸುನಾಭೀ-
ದೇಶವಸ್ಥಿತ ರಕ್ತಶ್ರೀಗಂ-
ಧಾಸುಶೋಭಿತಗಾತ್ರ ಲೋಕಪವಿತ್ರ ಸುರಮಿತ್ರ
ಮೂಷಿಕಾಸುರವಹನ ಪ್ರಾಣಾ-
ವೇಶಯುತ ಪ್ರಖ್ಯಾತ ಪ್ರಭು ಪೂ-
ರೈಸು ಭಕ್ತ್ತರ ಬೇಡಿದಿಷ್ಟಾರ್ಥಗಳ ಪ್ರತಿದಿನದಿ ॥8॥
ಶಂಕರಾತ್ಮಜ ದೈತ್ಯರಿಗತಿಭ-
ಯಂಕರ ಗತಿಗಳೀಯಲೋಸುಗ
ಸಂಕಟಚತುರ್ಥಿಗನೆನಿಸಿ ಅಹಿತಾರ್ಥಗಳ ಕೊಟ್ಟು
ಮಂಕುಗಳ ಮೋಹಿಸುವೆ ಚಕ್ರದ-
ರಾಂಕಿತನೆ ದಿನದಿನದಿ ತ್ವತ್ಪದ-
ಪಂಕಜಗಳಿಗೆ ಬಿನ್ನಯಿಸುವೆನು ಪಾಲಿಪುದು ಎಮ್ಮ ॥9॥
ಸಿದ್ಧವಿದ್ಯಾಧರ ಗಣಸಮಾ-
ರಾಧ್ಯಚರಣಸರೋಜ ಸರ್ವಸು-
ಸಿದ್ಧಿದಾಯಕ ಶೀಘ್ರದಿಂ ಪಾಲಿಪುದು ಬಿನ್ನಪವ
ಬುದ್ಧಿವಿದ್ಯಾಜ್ಞಾನಬಲ ಪರಿ-
ಶುದ್ಧಭಕ್ತ್ತಿವಿರಕ್ತ್ತಿ ನಿರುತನ-
ವದ್ಯನ ಸ್ಮೃತಿಲೀಲೇಗಳ ಸುಸ್ತವನ ವದನದಲಿ ॥10॥
ರಕ್ತ್ತವಾಸದ್ವಯ ವಿಭೂಷಣ
ಉಕ್ತ್ತಿ ಲಾಲಿಸು ಪರಮಭಗವ-
ದ್ಭಕ್ತ್ತವರ ಭವ್ಯಾತ್ಮ ಭಾಗವತಾದಿ ಶಾಸ್ತ್ರದಲಿ
ಸಕ್ತ್ತವಾಗಲಿ ಮನವು ವಿಷಯವಿ-
ರಕ್ತ್ತಿ ಪಾಲಿಸು ವಿದ್ವದಾದ್ಯ ವಿ-
ಮುಕ್ತ್ತನೆಂದೆನಿಸೆನ್ನ ಭವಭಯದಿಂದಲನುದಿನದಿ ॥11॥
ಶುಕ್ರಶಿಷ್ಯರ ಸಂಹರಿಪುದಕೆ
ಶಕ್ರ ನಿನ್ನನು ಪೂಜಿಸಿದನು ಉ-
ರುಕ್ರಮ ಶ್ರೀರಾಮಚಂದ್ರನು ಸೇತುಮುಖದಲ್ಲಿ
ಚಕ್ರವರ್ತೀ ಧರ್ಮರಾಜನು
ಚಕ್ರಪಾಣಿಯ ನುಡಿಗೆ ಭಜಿಸಿದ
ವಕ್ರತುಂಡನೇ ನಿನ್ನೊಳೆಂತುಟೋ ಈಶನುಗ್ರಹವು ॥12॥
ಕೌರವೇಂದ್ರನು ನಿನ್ನ ಭಜಿಸದ
ಕಾರಣದಿ ನಿಜಕುಲಸಹಿತ ಸಂ-
ಹಾರವೈದಿದ ಗುರುವರ ವೃಕೋದರನ ಗದೆಯಿಂದ
ತಾರಕಾಂತಕನನುಜ ಎನ್ನ ಶ-
ರೀರದೊಳು ನೀ ನಿಂತು ಧರ್ಮ-
ಪ್ರೇರಕನು ನೀನಾಗಿ ಸಂತೈಸೆನ್ನ ಕರುಣದಲಿ ॥13॥
ಏಕವಿಂಶತಿಮೋದಕಪ್ರಿಯ
ಮೂಕರನು ವಾಗ್ಮಿಗಳ ಮಾಳ್ಪ ಕೃ-
ಪಾಕರೇಶ ಕೃತಜ್ಞ ಕಾಮದ ಕಾಯೋ ಕೈವಿಡಿದು
ಲೇಖಕಾಗ್ರಣಿ ಮನ್ಮನದ ದು-
ರ್ವ್ಯಾಕುಲವ ಪರಿಹರಿಸು ದಯದಿ ಪಿ-
ನಾಕಿಭಾರ್ಯಾತನುಜ ಮೃದ್ಭವ ಪ್ರಾರ್ಥಿಸುವೆ ನಿನಗೆ ॥14॥
ನಿತ್ಯಮಂಗಳಚರಿತ ಜಗದು-
ತ್ಪತ್ತಿಸ್ಥಿತಿಲಯನಿಯಮನ ಜ್ಞಾ-
ನತ್ರಯಪ್ರದ ಬಂಧಮೋಚಕ ಸುಮನಸಾಸುರರ
ಚಿತ್ತವೃತ್ತಿಗಳಂತೆ ನಡೆವ ಪ್ರ-
ಮತ್ತನಲ್ಲ ಸುಹೃಜ್ಞನಾಪ್ತನ
ನಿತ್ಯದಲಿ ನೆನೆನ ನೆದು ಸುಖಿಸುವ ಭಾಗ್ಯ ಕರುಣಿಪುದು ॥15॥
ಪಂಚಭೇದಜ್ಞಾನವರುಪು ವಿ-
ರಿಂಚಿಜನಕನ ತೋರು ಮನದಲಿ
ವಾಂಛಿತಪ್ರದ ಒಲುಮೆಯಿಂದಲಿ ದಾಸನೆಂದರಿದು
ಪಂಚವಕ್ತ್ರನ ತನಯ ಭವದೊಳು
ವಂಚಿಸದೆ ಸಂತೈಸು ವಿಷಯದಿ
ಸಂಚರಿಸದಂದದಲಿ ಮಾಡು ಮನಾದಿಕರಣಗಳ ॥16॥
ಏನು ಬೇಡುವದಿಲ್ಲ ನಿನ್ನ ಕು-
ಯೋನಿಗಳು ಬರಲಂಜೆ ಲಕ್ಷ್ಮೀ-
ಪ್ರಾಣಪತಿ ತತ್ತ್ವೇಶರಿಂದೊಡಗೂಡಿ ಗುಣಕಾರ್ಯ
ತಾನೆ ಮಾಡುವನೆಂಬ ಈ ಸು-
ಜ್ಞಾನವನೆ ಕರುಣಿಸುವದೆಮಗೆ ಮ-
ಹಾನುಭಾವ ಮುಹುರ್ಮುಹುಃ ಪ್ರಾರ್ಥಿಸುವೆ ಇನಿತೆಂದು ॥17॥
ನಮೋ ನಮೋ ಗುರುವರ್ಯ ವಿಬುಧೋ-
ತ್ತಮ ವಿವರ್ಜಿತನಿದ್ರ ಕಲ್ಪ-
ದ್ರುಮನೆನಿಪೆ ಭಜಕರಿಗೆ ಬಹುಗುಣಭರಿತ ಶುಭಚರಿತ
ಉಮೆಯ ನಂದನ ಪರಿಹರಿಸಹಂ-
ಮಮತೆ ಬುಧ್ದ್ಯಾದಿಂದ್ರಿಯಗಳಾ-
ಕ್ರಮಿಸಿ ದಣಿಸುತಲಿಹವು ಭವದೊಳಗಾವಕಾಲದಲಿ ॥18॥
ಜಯಜಯತು ವಿಘ್ನೇಶ ತಾಪ-
ತ್ರಯವಿನಾಶನ ವಿಶ್ವಮಂಗಳ
ಜಯ ಜಯತು ವಿದ್ಯಾಪ್ರದಾಯಕ ವೀತಭಯಶೋಕ
ಜಯ ಜಯತು ಚಾರ್ವಂಗ ಕರುಣಾ-
ನಯನದಿಂದಲಿ ನೋಡಿ ಜನ್ಮಾ-
ಮಯ ಮೃತಿಗಳನು ಪರಿಹರಿಸು ಭಕ್ತ್ತರಿಗೆ ಭವದೊಳಗೆ ॥19॥
ಕಡುಕರುಣಿ ನೀನೆಂದರಿದು ಹೇ-
ರೊಡಲ ನಮಿಸುವೆ ನಿನ್ನಡಿಗೆ ಬೆಂ-
ಬಿಡದೆ ಪಾಲಿಸು ಪರಮಕರುಣಾಸಿಂಧು ಎಂದೆಂದು
ನಡುನಡುವೆ ಬರುತಿಪ್ಪ ವಿಘ್ನವ
ತಡೆದು ಭಗವನ್ನಾಮ ಕೀರ್ತನೆ
ನುಡಿದು ನುಡಿಸೆನ್ನಿಂದ ಪ್ರತಿದಿವಸದಲಿ ಮರೆಯದಲೆ ॥20॥
ಏಕವಿಂಶತಿ ಪದಗಳೆನಿಸುವ
ಕೋಕನದ ನವಮಾಲಿಕೆಯ ಮೈ-
ನಾಕಿತನಯಾಂತರ್ಗತಶ್ರೀಪ್ರಾಣಪತಿಯೆನಿಪ
ಶ್ರೀಕರ ಜಗನ್ನಾಥವಿಠ್ಠಲ
ಸ್ವೀಕರಿಸಿ ಸ್ವರ್ಗಾಪವರ್ಗದಿ
ತಾ ಕೊಡುವ ಸೌಖ್ಯಗಳ ಭಕ್ತ್ತರಿಗಾವಕಾಲದಲಿ ॥21॥
***