You can order Vishwavasu Samvatsara Panchanga from here

Articles/ ಸರ್ವಮೂಲದರ್ಶಿನೀ-೧೨

2 years ago

ಶ್ರೀಗುರುಭ್ಯೋ ನಮಃ

 

ತಂತ್ರಸಾರಸಂಗ್ರಹ

ಶ್ರೀಮದಾಚಾರ್ಯರು ರಚಿಸಿದ ಸರ್ವಮೂಲಗ್ರಂಥಗಳಲ್ಲಿ 
ತಂತ್ರಸಾರಸಂಗ್ರಹವು ಬಹಳ ವಿಶಿಷ್ಟವಾದ ಕೃತಿ. 

‘ತಂತ್ರ’ ಎಂಬ ಶಬ್ದವು ಅನೇಕಾರ್ಥಗಳಲ್ಲಿದ್ದರೂ “ದೇವತಾರಾಧನೆಯನ್ನು, ಅದಕ್ಕೆ ಸಂಬಂಧಪಟ್ಟ ವಿವಿಧ ಅಂಗಗಳನ್ನೂ ತಿಳಿಸುವ ಗ್ರಂಥಗಳು” ಎಂಬ ಅರ್ಥವು ಇಲ್ಲಿ ಪ್ರಸಕ್ತವಾಗಿದೆ. ಈ ತಂತ್ರಗಳು ಅನೇಕ ಇವೆ. ಶೈವತಂತ್ರ, ದೈವೀತಂತ್ರ, ವೈಷ್ಣವ ತಂತ್ರ ಇತ್ಯಾದಿ. 

ಇವುಗಳಲ್ಲಿ ಭಗವದ್ಗೀತೆ-ಭಾಗವತಾದಿಸಚ್ಛಾಸ್ತ್ರ ಗಳಲ್ಲಿ ಹೇಳಿದಂತೆ ಪ್ರವರ್ತಿಸಲು ಬಯಸುವ ಸಾಧಕರು ವೈಷ್ಣವತಂತ್ರವನ್ನೇ ಅನುಸರಿಸಬೇಕು. ಈ ವೈಷ್ಣವತಂತ್ರವೂ ಕೂಡ ಅನೇಕ ಗ್ರಂಥಗಳನ್ನು ಹೊಂದಿದೆ. ಒಂದೊಂದು ಗ್ರಂಥವೂ ಬಹುವಿಸ್ತೃತವಾದದ್ದು. ಪಂಚರಾತ್ರವೇ ಐವತ್ತುಕೋಟಿಶ್ಲೋಕರೂಪವಾಗಿದೆ ಎನ್ನುತ್ತಾರೆ ಶ್ರೀಮದಾಚಾರ್ಯರು 
“ಪಂಚಾಶತ್ ಕೋಟಿವಿಸ್ತಾರಾನ್ನಾರಾಯಣತನೌ ಕೃತಾತ್” 

ಪಂಚರಾತ್ರದಂತೆ ಶ್ರೀಮದಾಚಾರ್ಯರು ಸರ್ವ ಮೂಲಗಳಲ್ಲಿ ಉಲ್ಲೇಖಿಸಿರುವ ತಂತ್ರಮಾಲಾ, ತಂತ್ರನಿರ್ಣಯ, ತಂತ್ರನಿರುಕ್ತ, ತಂತ್ರಪ್ರಕಾಶಿಕಾ ಇತ್ಯಾದಿಗ್ರಂಥಗಳು ತಂತ್ರ ಶಾಸ್ತ್ರಕ್ಕೆ ಸಂಬಂಧಿಸಿದ ಎಂದು ಅವುಗಳ ಹೆಸರಿನಿಂದ ತಿಳಿಯಬಹುದು ಎಂದು ಕೆಲವರು ಹೇಳುತ್ತಾರೆ. “ತಂತ್ರಸಾರಸಂಗ್ರಹ” ಎಂಬ ಗ್ರಂಥದ ಹೆಸರೇ ಹೇಳುವಂತೆ ತಂತ್ರಸಾರ ಎಂಬ ಒಂದು ಗ್ರಂಥವಿದೆ. ಅದರ ಸಂಗ್ರಹವನ್ನು ಶ್ರೀಮದಾಚಾರ್ಯರು ಮಾಡಿದ್ದಾರೆ ಎಂದು ಸ್ಪಷ್ಟವಾಗುತ್ತದೆ. ಅಲ್ಲದೆ ತಂತ್ರಸಾರಸಂಗ್ರಹದಲ್ಲಿ ಶ್ರೀಮದಾಚಾರ್ಯರೆ ವಿಷ್ಣುಕೃತವಾದ ತಂತ್ರಸಾರದಲ್ಲಿ ಹೇಳಿದ ಮಂತ್ರಗಳನ್ನು ನಿರೂಪಿಸುತ್ತೇನೆ ಎಂದು ಹೇಳಿದ್ದಾರೆ 
“ಅಥ ವಿಷ್ಣೂದಿತೇ ತಂತ್ರಸಾರೇ ಮಂತ್ರಗಣೋ ಹಿ ಯು:”

ಹೀಗೆ ಪರಮಾತ್ಮನು ರಚಿಸಿದ ತಂತ್ರಸಾರವನ್ನು ಆಧರಿಸಿ ಅದರ ಸಂಗ್ರಹ ರೂಪವಾಗಿ ಹೊರಟಿರುವ ಗ್ರಂಥವೇ ಶ್ರೀಮದಾಚಾರ್ಯರ ತಂತ್ರಸಾರಸಂಗ್ರಹ.

ತಂತ್ರಸಾರಸಂಗ್ರಹದ ವಿನಿಯೋಗ ಹಾಗೂ ಉದ್ದೇಶ

ತಂತ್ರಸಾರ ಸಂಗ್ರಹವನ್ನು ರಚಿಸುವ ಉದ್ದೇಶವನ್ನು ಶ್ರೀಮದಾಚಾರ್ಯರೇ ಹೇಳಿದ್ದಾರೆ. ತಂತ್ರ ಮಾರ್ಗಗಳನ್ನು ಪರಮಾತ್ಮನು ಹೇಳಿದ್ದಾನೆ ಅವು ಅಸಂಖ್ಯಾತವಾಗಿವೆ. ಆ ಎಲ್ಲ ಮಾರ್ಗಗಳನ್ನು ತಿಳಿಯುವ ಸಾಮರ್ಥ್ಯವಾಗಲಿ ಅದರಲ್ಲಿ ಪ್ರವೃತ್ತಿ ಮಾಡುವ ಸಾಮರ್ಥ್ಯವಾಗಲಿ ಸಾಮಾನ್ಯ ಜನರಿಗೆ ಇಲ್ಲ. ಆ ಎಲ್ಲ ಮಾರ್ಗಗಳಲ್ಲಿ ಅತ್ಯಂತ ಸುಲಭವಾದ ಶೀಘ್ರ ಫಲದಾಯಿಯಾದ ಮಾರ್ಗವನ್ನು ಶ್ರೀಮದಾಚಾರ್ಯರು ಕಾರುಣ್ಯದಿಂದ ಸಂಗ್ರಹಿಸಿ ಕೊಟ್ಟಿದ್ದಾರೆ. ಎಷ್ಟನ್ನು ಅನುಷ್ಠಾನ ಮಾಡದಿದ್ದರೆ ಕರ್ಮ ಪೂರ್ತಿಯಾಗುವುದಿಲ್ಲ ಆ ಎಲ್ಲ ವಿಷಯಗಳನ್ನು ಮೂಲಗ್ರಂಥಾನುಗುಣವಾಗಿ ಇಲ್ಲಿ ತಿಳಿಸಿಕೊಟ್ಟಿದ್ದಾರೆ. ಆದ್ದರಿಂದ   ಇದಿಷ್ಟೆ ತಂತ್ರಶಾಸ್ತ್ರ ಎಂದು ತಿಳಿಯಬಾರದು.

ತಂತ್ರಮಾರ್ಗಾಸ್ತು ಹರಿಣಾ ಹ್ಯಸಂಖ್ಯಾ ಕಥಿತಾ ಅಪಿ।
ತೇಷ್ವಯಂ ಸುಗಮೋ ಮಾರ್ಗ: ಸುಫಲಶ್ಚಾನುತಿಷ್ಠತಾಂ।।
ಯಾವತೋ ಹ್ಯನನುಷ್ಠಾನೇ ಕರ್ಮಪೂರ್ತಿರ್ನ ವಿದ್ಯತೇ।
ತಾವತ್ಸಮಸ್ತಂ ಕಥಿತಂ ಹ್ಯಸ್ಮಿನ್ ತಂತ್ರೇ ಯಥಾವಿಧಿ।।

ಈ ಗ್ರಂಥದಲ್ಲಿ ಹೇಳಿರುವಂತೆ ಅನುಷ್ಠಾನವನ್ನು ಮಾಡಿ ಭಗವಂತನನ್ನು ಪೂಜಿಸಿದರೆ ಅದರಿಂದ ಪ್ರೀತನಾದ ಪರಮಾತ್ಮನು ಮೋಕ್ಷವನ್ನೇ ಕೊಡುತ್ತಾನೆ. ಕೇವಲ ಗ್ರಂಥದ ಪಠನ ಮಾಡಿದರೂ ಎಲ್ಲಾ ಅಪೇಕ್ಷಗಳು ಪೂರ್ಣವಾಗುತ್ತವೆ. ಇನ್ನು ಅದರ ಅರ್ಥ ಜ್ಞಾನ ತಿಳಿದರೆ, ಅಲ್ಲಿ ಹೇಳಿರುವಂತೆ ಅನುಷ್ಠಾನ ಮಾಡಿದರೆ ಎಂಥಾ ಫಲವು ಸಿಗಲಿಕ್ಕಿಲ್ಲ? ಊಹಿಸಲೂ ಅಸಾಧ್ಯ. 

ಪ್ರೀಯತೇऽನೇನ ಮಾರ್ಗೇಣ ಪೂಜಿತೋ ಮುಕ್ತಿದೋ ಭವೇತ್ ।
ಕಾಮದಶ್ಚ ಸ್ವಭಕ್ತಾನಾಂ ಭಗವಾನ್ ಪುರುಷೋತ್ತಮ: ।।
ಗ್ರಂಥೋऽಯಂ ಪಾಠಮಾತ್ರೇಣ ಸಕಲಾಭೀಷ್ಟಸಿದ್ಧಿದ: ।
ಕಿಮು ಜ್ಞಾನಾದನುಷ್ಠಾನಾತ್ ಉಭಯಸ್ಮಾತ್ ಪುನಃ ಕಿಮು ।।

“ಈ ತಂತ್ರಸಾರಸಂಗ್ರಹವನ್ನು ಆಶ್ರಯಿಸಿ ಫಲವನ್ನು ಪಡೆಯದಿರಲು ಸಾಧ್ಯವೇ ಇಲ್ಲ. ಇದು ದೇವತೆಗಳಿಗೆ ಕಲ್ಪವೃಕ್ಷವಿದ್ದಂತೆ ಇದೆ. ಸಾಧಕನಾದವನು ಇದನ್ನು ಆಶ್ರಯಿಸಲೇಬೇಕು” ಎಂದು ಪಂಡಿತಾಚಾರ್ಯರು ಉದ್ಘೋಷಿಸಿದ್ದಾರೆ.

ಕಸ್ತಂತ್ರಸಾರಂ ಸಂಪ್ರಾಪ್ಯ ನ ಸ್ಯಾತ್ ಪರ್ಯಾಪ್ತವಾಂಛಿತ:।
ಅಮರೈರಾಶ್ರಿತಚ್ಛಾಯಂ ಕಲ್ಪದ್ರುಮಮಿವೋತ್ತಮಂ ।।

“ಸಂಗ್ರಹರೂಪವಾದ ಈ ಗ್ರಂಥವು ಕೂಡ ಸೂತ್ರದಂತೆ ಬಹ್ವರ್ಥಗರ್ಭಿತವಾಗಿದೆ” ಎಂದು ಶ್ರೀಮಟ್ಟೀಕಾಕೃತ್ಪಾದರು ತಿಳಿಸುತ್ತಾರೆ.

ಪೂಜ್ಯಶ್ಚ ಭಗವಾನ್ನಿತ್ಯಮಿತ್ಯಧ್ಯಾಯೇ ಯಥಾಕ್ರಮ: ।
ಶ್ರೀಮಧ್ವಗುರುಣಾ ಪ್ರೋಕ್ತೋ ಪೀಠಾವರಣಪೂಜನೇ ।
ಸೂತ್ರತ್ವಾತ್ತಸ್ಯ ಬೋಧಾರ್ಥಂ ಕ್ವಚಿದ್ವಕ್ಷ್ಯಾಮಿ ವಿಸ್ತರಂ ।।

ಭಕ್ತರ ಮೇಲಿನ ಕಾರಣ್ಯದಿಂದ ಈ ರೀತಿಯ ಪರಮೋಪಕಾರವನ್ನು ಮಾಡಿದ ಶ್ರೀಮದಾಚಾರ್ಯರ ಕಾರುಣ್ಯಕ್ಕೆ ಅನಂತಾನಂತ ನಮನಗಳು. ಶಾಸ್ತ್ರಾಧಿಕಾರವಿರುವವರು ಪ್ರತಿನಿತ್ಯವೂ ತಪ್ಪದೇ ಈ ಗ್ರಂಥದ ಪಾರಾಯಣವನ್ನು ಕನಿಷ್ಠ ಪಕ್ಷ  ಕೆಲವು ಶ್ಲೋಕಗಳ ಪಾರಾಯಣವನ್ನಾದರೂ ಮಾಡುವ ಪದ್ಧತಿಯನ್ನು ಅನುಸರಿಸುವುದು ಯೋಗ್ಯವಾಗಿದೆ. ಅಪೇಕ್ಷೆ-ಶಕ್ತಿ ಇರುವವರು ಇದರ ಪಾಠವನ್ನು ಕೇಳುವ ಅದರಂತೆ ಬದುಕುವ ಪ್ರಯತ್ನವನ್ನು ಮಾಡಬೇಕು.

ಈ ಗ್ರಂಥಕ್ಕೆ ಅನೇಕ ವ್ಯಾಖ್ಯಾನಗಳವೆ. ಕೆಲವು ಮುದ್ರಿತವಾಗಿವೆ. ಕೆಲವು ಅಮುದ್ರಿತವಾಗಿವೆ. ಕೆಲವು ನಾಮಾವಶೇಷಗಳಾಗಿವೆ. ಕೆಲವು ಅಜ್ಞಾತಗಳೂ ಆಗಿರಬಹುದು. ಶ್ರೀಮಟ್ಟೀಕಾಕೃತ್ಪಾದರ ಸಾಕ್ಷಾತ್ ಶಿಷ್ಯರಾದ ವಾಸತೀರ್ಥರು ಇದಕ್ಕೆ ಟೀಕೆ ರಚಿಸಿದ್ದಾರೆ ಎಂದು ಪ್ರತೀತಿ ಇದೆ. ಆದರೆ ಉಪಲಬ್ಧವಾಗಿಲ್ಲ. ಛಲಾರಿ ಆಚಾರ್ಯರ ವ್ಯಾಖ್ಯಾನ, ಶೇಷಚಂದ್ರಿಕಾಚಾರ್ಯರ ತತ್ವಕಣಿಕಾ, ಬಿದಿರಹಳ್ಳಿ ವೇಂಕಟಪತ್ಯಾಚಾರ್ಯರ  ವ್ಯಾಖ್ಯಾನ ಅತ್ಯಂತ ಉಪಯುಕ್ತಗಳೂ ಪ್ರಸಿದ್ಧವೂ ಆಗಿವೆ. ಇಂತಹ ಅತ್ಯುತ್ತಮ ಕೃತಿರತ್ನವನ್ನು ರಚಿಸಿರುವ ಶ್ರೀಮದಾಚಾರ್ಯರ ಪರಮೋಪಕಾರವನ್ನು ಮನಸ್ಸಿನಲ್ಲಿ ನಿರಂತರವಾಗಿ ಸ್ಮರಿಸೋಣ.

ಆಚಾರ್ಯಾ: ಶ್ರೀಮದಾಚಾರ್ಯಾ: ಸಂತು ಮೇ ಜನ್ಮಜನ್ಮನಿ 

ಶ್ರೀಕೃಷ್ಣಾರ್ಪಣಮಸ್ತು.

Sri Uttaradi Math Apps

Sri Uttaradi Math

Sri Uttaradi Math

VVS Matrimony

VVS Matrimony

UM Stotra

UM Stotra

Satyatma Vani

Satyatma Vani

Sandhyavandanam and Stotra (Web)

Sandhyavandanam and Stotra (Web)